ಜಿಲ್ಲೆ

ಉದ್ಯಾನಕ್ಕೆ ಮೆರುಗು ನೀಡಿದ ನಿವೃತ್ತ ಶಿಕ್ಷಕ

ಬೀರೂರು: ಪಟ್ಟಣದ ಲಿಂಗದಹಳ್ಳಿ ರಸ್ತೆಯಲ್ಲಿ ಪುರಸಭೆ ಸ್ಥಾಪಿಸಿದ್ದ ಚಿಕ್ಕ ಉದ್ಯಾನವನ್ನು ಕೆಲ ಪರಿಸರಾಸಕ್ತರು ಮತ್ತಷ್ಟು ಅಭಿವೃದ್ಧಿಪಡಿಸಿ, ಚೊಕ್ಕವಾಗಿಸಿದ್ದು ನೋಡುಗರ ಮನ ಸೆಳೆಯುವಂತಿದೆ.

ಕೆಲ ವರ್ಷಗಳ ಹಿಂದೆ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಪುರಸಭೆ ಸದಸ್ಯರು ನಿರ್ವಹಿಸುವಂತೆ ಸೂಚಿಸಿ ಪಾರ್ಕ್ ಉದ್ಘಾಟಿಸಲಾಗಿತ್ತು. ಆದರೆ ಅಲ್ಲಿ ಸಸಿ ನೆಡಲು ಸೀಮಿತಗೊಂಡ ಸದಸ್ಯರು ನಂತರ ತಲೆ ಹಾಕಿರಲಿಲ್ಲ. ಈ ನಡುವೆ ಪುರಸಭೆ ಆಡಳಿತ ಪಾರ್ಕ್​ಗೆ ಲಾಕಿಂಗ್ ಟೈಲ್ಸ್ ಹಾಕಿ, ಕಲ್ಲು ಬೆಂಚುಗಳು, ಹನಿ ನೀರಾವರಿ ಮತ್ತು ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಿದೆ.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿ.ಸಿ.ಕುಮಾರ್ ಎಂಬುವವರು ಸ್ನೇಹಿತರೊಂದಿಗೆ ಪಾರ್ಕ್ ಅಭಿವೃದ್ಧಿಪಡಿಸಲು ಮುಂದಾದರು. ಗಿಡಗಳ ಸಂರಕ್ಷಣೆ, ಹೆಚ್ಚುವರಿ ಗಿಡ ನೆಟ್ಟು ಪಾರ್ಕ್​ನಲ್ಲಿ ಬೆಳೆದ ಕಳೆ ಕಿತ್ತು ಸ್ವಚ್ಛ ಮಾಡಲಾಗಿದೆ. ಇದರಿಂದ ಪಾರ್ಕ್ ನಳನಳಿಸುತ್ತಿದೆ.

ಬೆಳಗಾದರೆ ವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಬಂದು ತಮ್ಮ ಬಿಡುವಿನ ಸಮಯ ಕಳೆಯುವ ಈ ಉದ್ಯಾನ ಮಾರ್ಗದ ಕ್ಯಾಂಪ್ ನಿವಾಸಿಗಳ ಪಾಲಿಗೆ ಸ್ವರ್ಗ. ಶ್ರಮಕ್ಕೆ ಪ್ರತಿಫಲ ನಿರೀಕ್ಷಿಸದೆ 60-70 ಗಿಡಗಳನ್ನು ಸತತ ಮೂರು ವರ್ಷಗಳಿಂದ ಕಾಪಾಡುತ್ತಿದ್ದಾರೆ ಕುಮಾರ್. ಹೊಂಗೆ, ಗಸಗಸೆ, ಬೇವು, ಹಲಸು, ಕಾಡುಬಾದಾಮಿ ಹೀಗೆ ಅನೇಕ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಸ್ಥಳೀಯ ಆಡಳಿತ ಮತ್ತು ನಾಗರಿಕರ ನಿರ್ಲಕ್ಷ್ಯಂದ ಸೊರಗಿ ಒಳಹೋಗಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಉದ್ಯಾನವನ್ನು ಸುಸ್ಥಿತಿಗೆ ತರಬೇಕು. ಸಾರ್ವಜನಿಕ ಆಸ್ತಿಯನ್ನು ಸುಂದರವಾಗಿ ರೂಪಿಸಬೇಕು ಎಂಬ ಉದ್ದೇಶದಿಂದ ಶ್ರಮಪಡುತ್ತಿದ್ದೇವೆ. ಇದಕ್ಕೆ ಕೆಲವರ ಬೆಂಬಲದಿಂದ ಯಶಸ್ಸು ಸಿಕ್ಕಿದೆ. ಅಕ್ಕಪಕ್ಕದವರು ಇಲ್ಲಿ ನಡೆಯುವ ಕೆಲಸಗಳನ್ನು ವೀಕ್ಷಿಸಿ ತಾವಾಗಿಯೇ ಬಂದು ಹಣ ಸಹಾಯ ಮಾಡುತ್ತಿದ್ದಾರೆ. ನಾನು ನಮ್ಮ ಮನೆ ಸುತ್ತಮುತ್ತ ಗಿಡಮರ ಬೆಳೆಸುತ್ತಿದ್ದೇನೆ. ಇದರಲ್ಲಿಯೇ ಖುಷಿ ಕಾಣುತ್ತಿದ್ದೇನೆ. ನನ್ನ ಯೋಗ, ವ್ಯಾಯಾಮದ ಜತೆ ಈ ಕೆಲಸ ನಿಸರ್ಗದೊಂದಿಗೆ ಒಡನಾಟ ಇಟ್ಟುಕೊಳ್ಳುವಂತೆ ಮಾಡಿದೆ ಎನ್ನುತ್ತಾರೆ ಸಿ.ಸಿ.ಕುಮಾರ್.

ಪುರಸಭೆ ಆಡಳಿತ ತನ್ನ ವ್ಯಾಪ್ತಿಯ ಉದ್ಯಾನಗಳನ್ನು ಸಂರಕ್ಷಿಸಬೇಕು ಎನ್ನುವುದಾದರೆ ನಾಗರಿಕರ ಸಹಭಾಗಿತ್ವ ತುಂಬ ಅಗತ್ಯ. ಈ ದಿಸೆಯಲ್ಲಿ ಪುರಸಭೆ ಜತೆ ಕೈಜೋಡಿಸಲು ನಾವು ಸಿದ್ಧ. ಪರಿಸರ ಉಳಿಸಿ ನಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಈ ಅರಿವು ಎಲ್ಲರಲ್ಲೂ ಮೂಡಿದರೆ ಸುಂದರ ಪರಿಸರ ಸೃಷ್ಟಿ ಸಾಧ್ಯ ಎನ್ನುತ್ತಾರೆ ಸಿ.ಸಿ.ಕುಮಾರ್

ಸಾರ್ವಜನಿಕ ಆಸ್ತಿ ಕಾಪಾಡುವುದು ನಾಗರಿಕರ ಕರ್ತವ್ಯ. ಉದ್ಯಾನಕ್ಕೆ ಮೂಲ ಸೌಲಭ್ಯ ಪುರಸಭೆ ಕಲ್ಪಿಸಿದೆ. ಕುಮಾರ್ ಅವರು ಸ್ವಯಂಪ್ರೇರಿತರಾಗಿ ಉದ್ಯಾನದ ಸ್ವಚ್ಛತೆಗೆ ಮುಂದಾಗಿರುವುದನ್ನು ಪುರಸಭೆ ಪ್ರೋತ್ಸಾಹಿಸುತ್ತದೆ. ಆದರೆ ಕಳೆ ತೆಗೆಯುವುದು ಮತ್ತಿತರ ಕೆಲಸಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗುವುದಿಲ್ಲ ಎಂದು ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಲಕ್ಷ್ಮಣ್ ಹೇಳಿದ್ದಾರೆ.