ಕಡೂರು: ಹಿಂದು ಸಂಸ್ಕೃತಿಯಲ್ಲಿ ಸ್ಮಶಾನಕ್ಕೂ ಪವಿತ್ರ ಸ್ಥಾನವಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಚಂದ್ರಮೌಳೇಶ್ವರ ಸ್ವಾಮಿ ದೇಗುಲ ಬಳಿಯ ಸ್ಮಶಾನವನ್ನು ಮಾದರಿಯನ್ನಾಗಿಸಲು ಪುರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಸ್ಮಶಾನದಲ್ಲಿ ಗಿಡ ನೆಡಲು ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ 14ನೇ ಹಣಕಾಸು ಅನುದಾನದಡಿ 40 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ನೀರಿನ ವ್ಯವಸ್ಥೆ, ಶೌಚಗೃಹ, ಸ್ನಾನದಗೃಹ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು. ಸ್ಮಶಾನದ ಸುತ್ತಲೂ ಹೈಮಾಸ್ಟ್ ದೀಪ ಮತ್ತು ಸಿಸಿ ರಸ್ತೆ ನಿರ್ವಿುಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯಾನ ಕಲ್ಪನೆಯಲ್ಲಿ ಆಸನಗಳ ವ್ಯವಸ್ಥೆ ಹಾಗೂ ಅಲಂಕಾರಿಕ ಹಾಗೂ ಹೂವಿನ ಗಿಡಗಳನ್ನು ನೆಡಲಾಗುವುದು. ಸ್ವಚ್ಚತೆ ಮತ್ತು ನಿರ್ವಹಣೆಗಾಗಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದ್ದು ಸಾರ್ವಜನಿಕರು ಶುಚಿತ್ವಕ್ಕೆ ಆದ್ಯತೆ ನೀಡಬೇಕಿದೆ ಎಂದು ಮನವಿ ಮಾಡಿದರು. <p>ಪುರಸಭೆ ಸದಸ್ಯ ತೋಟದಮನೆ ಮೋಹನ್ಕುಮಾರ್ ಮಾತನಾಡಿ, 1ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ಸ್ಮಶಾನದ ಅಭಿವೃದ್ಧಿಗೆ ಪಕ್ಷ ಬೇಧವಿಲ್ಲದೆ ಎಲ್ಲ ಸದಸ್ಯರೂ ಸಹಕಾರ ನೀಡಿದ್ದಾರೆ. ಅಧ್ಯಕ್ಷರ ಒತ್ತಾಸೆಯಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಮಾದರಿಯನ್ನಾಗಿಸಲಾಗುತ್ತಿದೆ ಎಂದರು. ಮುಖ್ಯಾಧಿಕಾರಿ ರುದ್ರೇಶ್, ಪರಿಸರ ಅಭಿಯಂತ ವೈ.ಕೆ.ಶ್ರೇಯಸ್ಕುಮಾರ್, ಮುಖಂಡರಾದ ಚಿನ್ನರಾಜು, ಕಾಂತರಾಜ್, ಗುತ್ತಿಗೆದಾರರಾದ ಕೆ.ಎಸ್.ಶ್ರೀನಿವಾಸ್, ಎಂ.ಶ್ರೀನಿವಾಸ್, ಪುರಸಭೆ ದಫೇದಾರ್ ಮಂಜುನಾಥ್ ಇತರರಿದ್ದರು.