ಜಿಲ್ಲೆ

ಉದ್ಯಾನ ಒತ್ತುವರಿ ತೆರವಿಗೆ ನಿರ್ಧಾರ

ಬೇಲೂರು : ಬೇಲೂರು ಪಟ್ಟಣದ ಬಹುತೇಕ ಉದ್ಯಾನ ಮತ್ತು ಸರ್ಕಾರಿ ಆಸ್ತಿಗಳು ಒತ್ತುವರಿಯಾಗಿದ್ದು, ಪುರಸಭೆಯಿಂದ ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.
ಪಟ್ಟಣದ ಜೂನಿಯರ್ ಕಾಲೇಜು ಅವರಣದ ಬಳಿಯ ಉದ್ಯಾನಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಪುರಸಭೆಯ 23 ವಾರ್ಡ್‌ಗಳಲ್ಲಿ 35 ಉದ್ಯಾನ ಗುರುತಿಸಲಾಗಿದೆ. ಅವುಗಳ ಅಭಿವೃದ್ಧಿ ಜತೆಗೆ ಹಸಿರೀಕರಣ ಗೊಳಿಸುವ ಸಂಕಲ್ಪ ಮಾಡಲಾಗಿದೆ. ಹಾಗಾಗಿ ಸಿಬ್ಬಂದಿಯೊಂದಿಗೆ ಎಲ್ಲ ಉದ್ಯಾನಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದರು.
ಪಂಪ್‌ಹೌಸ್ ರಸ್ತೆಯಲ್ಲಿರುವ ಉದ್ಯಾನವನ್ನು ಹಸಿರುಭೂಮಿ ಪ್ರತಿಷ್ಠಾನದವರು ದತ್ತು ಪಡೆದಿದ್ದಾರೆ. ಉಳಿದ ಉದ್ಯಾನಗಳನ್ನೂ ಸಂಘ-ಸಂಸ್ಥೆಯವರು ದತ್ತು ಪಡೆಯಬಹುದು ಎಂದರು. ಪಟ್ಟಣದ ಎಲ್ಲ ನಾಗರಿಕರೂ ಉದ್ಯಾನಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು
ಪುರಸಭಾ ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ, ತಡೆಗೋಡೆ ನಿರ್ಮಿಸಲು ಸಾಧ್ಯವಾಗದ ಕಾರಣ ಬಹುತೇಕ ಉದ್ಯಾನಗಳು ಒತ್ತುವರಿಯಾಗಿವೆ. ಜೂನಿಯರ್ ಕಾಲೇಜು ಪಕ್ಕದ ಉದ್ಯಾನ ನಿರ್ವಹಣೆ ಇಲ್ಲದೆ ಹಾಳಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಪುರಸಭೆ ಮುಖ್ಯಾಧಿಕಾರಿಗಳ ದಕ್ಷತೆ ಯಿಂದ ಒತ್ತುವರಿ ತೆರವಾಗಬೇಕು ಎಂದರು.
ಕಸಾಪ ಅಧ್ಯಕ್ಷ ಬಿ.ಎಲ್.ರಾಜೇಗೌಡ, ಕಸಾಪ ಮಾಜಿ ಅಧ್ಯಕ್ಷ ಶಿವಮೂರ್ತಿ, ಪುರಸಭೆ ವ್ಯವಸ್ಥಾಪಕ ಪ್ರಶಾಂತ್, ಆರೋಗ್ಯಾಧಿಕಾರಿ ಲೋಹಿತ್ ಇತರರಿದ್ದರು.