ಮಳವಳ್ಳಿ: ಕಾರ್ಮಿಕರ ಶ್ರಮದಿಂದ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಶಿವಾ-ಶಿಂಷಾ ಜಲ ವಿದ್ಯುತ್ ಯೋಜನಾ ಮುಖ್ಯಸ್ಥ ಎನ್.ನವೀನ್‌ಕುಮಾರ್ ತಿಳಿಸಿದರು.
ತಾಲೂಕಿನ ಶಿವನಸಮುದ್ರಂ(ಬ್ಲಫ್) ಗ್ರಾಮದ ಸೌರಶಕ್ತಿ ವಿದ್ಯುತ್ ಕೇಂದ್ರದ ಆವರಣದಲ್ಲಿ ಕರ್ನಾಟಕ ವಿದ್ಯುತ್ ನಿಗಮ ಹಾಗೂ ಪವರ್ ಕಾರ್ಪೊರೇಷನ್ ಎಂಪ್ಲಾಯಿಸ್ ಯೂನಿಯನ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಉದ್ಯಮ ಕ್ಷೇತ್ರಗಳು ಯಶಸ್ವಿಯಾಗಿ ನಡೆಯಲು ಕಾರ್ಮಿಕರೇ ಆಧಾರ ಸ್ತಂಭ. ಅವರ ನಿಷ್ಠೆಯ ದುಡಿಮೆಯಿಂದ ಮಾಲೀಕನಿಗೆ ಬಲ ಹೆಚ್ಚುವುದರ ಜತೆಗೆ ಮತ್ತಷ್ಟು ಕಾರ್ಖಾನೆಗಳನ್ನು ತೆರೆದು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.
ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳಲ್ಲಾಗಲಿ ಯಾವುದೇ ವ್ಯಕ್ತಿ ಎಂತಹ ದೊಡ್ಡ ಮಟ್ಟದ ಹುದ್ದೆಗಳಲ್ಲಿದ್ದರೂ ಆತ ಕಾರ್ಮಿಕನೇ ಆಗಿರುತ್ತಾನೆ. ಆದರೆ ವೃತ್ತಿ ಕೌಶಲತೆಗಳು ಬೇರೆಯಾಗಿರುತ್ತವೆ. ಆದ್ದರಿಂದ ಶ್ರಮಿಕ ವರ್ಗದ ಕಾರ್ಮಿಕರನ್ನು ದೊಡ್ಡ ಹುದ್ದೆಗಳಲ್ಲಿರುವ ಅಧಿಕಾರಿಗಳು ಗೌರವದಿಂದ ನಡೆಸಿಕೊಳ್ಳಬೇಕು. ಆಗ ಮಾತ್ರ ಯಾವುದೇ ಸಂಸ್ಥೆಗಳಲ್ಲಿ ವೇಗದಿಂದ ಮತ್ತು ಶಿಸ್ತಿನಿಂದ ಕೆಲಸಗಳು ನಡೆಯುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಮಿಕ ಇಲಾಖೆ ಜಿಲ್ಲಾ ಇಸಿಒ ಎಂ.ಎಸ್.ಮಂಜುಳಾದೇವಿ ಮಾತನಾಡಿ, ಇಲಾಖೆಯಿಂದ ಸಿಗುವ ಸೌಲಭ್ಯಗಳು ಹಾಗೂ ಪಡೆದುಕೊಳ್ಳುವ ವಿಧಾನಗಳ ಬಗ್ಗೆ ವಿವರಿಸಿದರು. ಉತ್ತಮ ಸೇವೆ ಸಲ್ಲಿಸಿದ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಎಂಪ್ಲಾಯ್ ಯೂನಿಯನ್ ಪದಾಧಿಕಾರಿಗಳಾದ ಎಸ್.ನಂಜಪ್ಪ, ಕೆ.ವಿರೇಂದ್ರ, ಎಂ.ಶ್ರೀನಿವಾಸ್, ಎಚ್.ಎಂ.ಮಹದೇವ ಇತರರಿದ್ದರು.