ಜಿಲ್ಲೆ

ಉದ್ದೇಶಪೂರ್ವಕವಾಗಿಯೇ ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲು: ಸಂಸದ ಪ್ರತಾಪ್‌ಸಿಂಹ ಸಮರ್ಥನೆ

ಮೈಸೂರು: ಉದ್ದೇಶಪೂರ್ವಕವಾಗಿಯೇ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಬದಲಾಯಿಸಲು ಶ್ರಮಿಸಿದ್ದೇನೆ ಎಂದು ಸಂಸದ ಪ್ರತಾಪಸಿಂಹ, ಟಿಪ್ಪು ಹೆಸರು ಬದಲಾಯಿಸಿರುವುದನ್ನು ಸಮರ್ಥಿಸಿಕೊಂಡರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ರಾಜರ ನೂರು ಕೊಡುಗೆಗಳನ್ನು ನಾನು ಹೇಳಬಲ್ಲ. ಆದರೆ, ಟಿಪ್ಪು ಹೆಸರು ಬದಲಾಯಿಸಿದ್ದಕ್ಕೆ ಟೀಕೆ ಮಾಡುವವರು ಮೈಸೂರಿಗೆ ಟಿಪ್ಪುವಿನ ಮೂರು ಕೊಡುಗೆ ಏನು ಎಂದು ಹೇಳಲಿ ಸಾಕು ಎಂದು ಸವಾಲು ಹಾಕಿದರು.
ಮೋದಿ ಅವರು ಪ್ರಧಾನಿಯಾದ ಬಳಿಕ ನಾನು ಸಂಸದನಾಗಿ 10 ಹೊಸ ರೈಲುಗಳನ್ನು ಮೈಸೂರಿಗೆ ತಂದು, ಅನೇಕ ಹೆಸರುಗಳನ್ನು ಇಡಲಾಗಿದೆ. ಆದರೆ ಟಿಪ್ಪು ಹೆಸರನ್ನು ತೆಗೆದು ಒಡೆಯರ್ ಹೆಸರು ಇಡಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು. ಅದು ಈಡೇರಿದೆ ಎಂದರು.
ಮೈಸೂರು ಒಡೆಯರ್‌ರನ್ನು ಇಳಿಸಿ ಆಳ್ವಿಕೆ ಮಾಡಿದ ಟಿಪ್ಪು ಶ್ರೀರಂಗಪಟ್ಟಣದವನು. ಮೈಸೂರಿನಲ್ಲಿ ಆತನ ಅಭಿವೃದ್ಧಿ ಶೂನ್ಯ. ಟಿಪ್ಪು ಒಬ್ಬ ಕನ್ನಡ ವಿರೋಧಿ. ಪರ್ಷಿಯನ್ ಭಾಷೆಯನ್ನು ಕನ್ನಡದ ಮೇಲೆ ಹೇರಿದ್ದಾನೆ. ಕಂದಾಯ ಇಲಾಖೆಯಲ್ಲಿನ ಪ್ರತಿಯೊಂದು ಪದಗಳು ಪರ್ಷಿಯನ್‌ನಿಂದ ಬಂದಿವೆ. ಅದನ್ನೂ ಬದಲಾಯಿಸುವ ಅಗತ್ಯವಿದೆ ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒಡೆಯರ್ ಬಗ್ಗೆ ಉಡಾಫೆಯಿಂದ ಮಾತನಾಡುವುದು ಸರಿಯಲ್ಲ. ದೇವರಾಜ ಮಾರುಕಟ್ಟೆ ಹಾಗೂ ರಾಜರ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದಾರೆ. ‘ಮಹಾರಾಜ ಏನು ಅವನ ಸ್ವಂತ ದುಡ್ಡಿನಿಂದ ಅಭಿವೃದ್ಧಿ ಮಾಡಿದ್ದಾನಾ’ ಎಂದಿದ್ದ ಸಿದ್ದರಾಮಯ್ಯ ಟಿಪ್ಪು ಪರ ಮಾತನಾಡುತ್ತಾರೆ. ಮೈಸೂರು ರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯ ಅವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಟೀಕಿಸಿದರು.
ಈ ಬಾರಿಯ ಅದ್ದೂರಿ ದಸರಾ ಅಧ್ವಾನದಿಂದ ಕೂಡಿತ್ತು ಎಂದು ಬೇಸರ ವ್ಯಕ್ತಪಡಿಸಿರುವ ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮದುವೆ ನಡೆಸುವಾಗ ಸಾಕಷ್ಟು ತಪ್ಪುಗಳು ನಡೆಯುತ್ತವೆ. ಹೀಗಿರುವಾಗ ಸುಮಾರು 40 ಲಕ್ಷ ಜನರು ವೀಕ್ಷಿಸಿದ ನಾಡಹಬ್ಬ ದಸರಾದಲ್ಲಿ ಕೆಲ ಸಮಸ್ಯೆಗಳು ಅಗುವುದು ಸಹಜ. ಮೊಸರಲ್ಲಿ ಕಲ್ಲು ಹುಡುಕುವುದು ಸರಿಯಲ್ಲ. ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕರ್ನಾಟಕ ಕ್ರಿಕೆಟ್ ಅಕಾಡೆಮಿ (ಕೆಸಿಎ) ಕೋರಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದು, ಸಚಿವ ಸಂಪುಟದ ಮುಂದೆ ಬರಲಿದೆ. ಕ್ರೀಡಾಂಗಣ ನಿರ್ಮಾಣಕ್ಕಾಗಿ ಸಾತಹಳ್ಳಿ ಬಳಿ 20 ಎಕರೆ ಜಾಗ ಗುರುತಿಸಿದ್ದು, ಸರ್ಕಾರದ ಅನುಮೋದನೆ ಬಳಿಕ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.