ಮೈಸೂರು: ಗೊಂದಲದ ಗೂಡಾಗಿದ್ದ ಉದ್ದಿಮೆ ಪರವಾನಗಿ ಪಾವತಿಗೆ ತಂತ್ರಾಂಶ ರೂಪಿಸುವ ಮೂಲಕ ಸರಳೀಕೃತ ವ್ಯವಸ್ಥೆಯನ್ನು ಮೈಸೂರು ಮಹಾನಗರ ಪಾಲಿಕೆ ಜಾರಿಗೆ ತಂದಿದ್ದು, ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ. ಹಾಗೆಯೆ, ಉಳಿದಿರುವ ಕೆಲ ಸಮಸ್ಯೆಗಳತ್ತಲೂ ಗಮನ ಹರಿಸಬೇಕಿದೆ.
ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿದ ತಕ್ಷಣವೇ ರಹದಾರಿಯನ್ನು ನವೀಕರಿಸಬಹುದಾಗಿದೆ. ಈ ವಿಧಾನ ಬಹು ಆಯಾಮಗಳಲ್ಲಿ ಬಹು ಉಪಯೋಗಿಯಾಗಿದೆ. ಉದ್ದಿಮೆದಾರರು ತಾವಿದ್ದಲ್ಲಿಯೇ ಶುಲ್ಕ ಪಾವತಿಸಿ ರಹದಾರಿ ಪಡೆದುಕೊಳ್ಳಬಹುದು. ಮಧ್ಯವರ್ತಿಗಳ ಸಹಾಯವಿಲ್ಲದೆ, ಸರಳ ವಿಧಾನ ಅನುಸರಿಸಬಹುದು. ಇದೊಂದು ಕಾಗದ ರಹಿತ ಮತ್ತು ಪರಿಸರ ಸ್ನೇಹಿ ವಿಧಾನವಾಗಿದೆ ಎಂದು ಪಾಲಿಕೆ ಹೇಳಿಕೊಂಡಿದೆ.
ಈ ಹಿಂದೆ ಟ್ರೇಡ್ ಲೈಸೆನ್ಸ್ ಪಡೆಯಲು ವ್ಯಾಪಾರಸ್ಥರು ಪಾಲಿಕೆ ಕಚೇರಿಗೆ ಅಲೆಯಬೇಕಿತ್ತು. ಕೆಲಸ ಮಾಡಿಕೊಡಲು ಅಧಿಕಾರಿಗಳ ಕೈ ಬಿಸಿ ಮಾಡಬೇಕಿತ್ತು. ಅದೀಗ ತಪ್ಪಿದೆ. ತಾವಿರುವ ಸ್ಥಳದಲ್ಲಿಯೇ ತಮ್ಮ ಟ್ರೇಡ್ ಲೈಸನ್ಸ್ ಸಂಖ್ಯೆ ನಮೂದಿಸಿ, ತೆರಿಗೆ ಪಾವತಿಸಬಹುದು. ಪಾವತಿಯ ರಸೀದಿಯ ಪ್ರಿಂಟ್ ಕೂಡ ತೆಗೆದುಕೊಳ್ಳಬಹುದಾಗಿದೆ.
ಪಾಲಿಕೆ ಚಾಪೆ ಕೆಳಗೆ ನುಸುಳಿದರೆ, ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳುವ ಸಾಧ್ಯತೆ ಹೆಚ್ಚಿರುತ್ತದೆ. ಆನ್‌ಲೈನ್ ವ್ಯವಸ್ಥೆ ರೂಪುಗೊಂಡ ಬಳಿಕವೂ ತಾಂತ್ರಿಕ ಕಾರಣಗಳ ನೆಪ ಹೇಳಿ ವ್ಯಾಪಾರಸ್ಥರಿಗೆ ತೊಂದರೆ ಕೊಡುವ ಸಾಧ್ಯತೆ ಇದ್ದು, ಈ ಕುರಿತು ಕಣ್ಗಾವಲು ಇಡುವ ಮೂಲಕ ಎದುರಾಗುವ ದೂರು, ಆಕ್ಷೇಪಗಳ ಪರಿಹಾರಕ್ಕೂ ಕ್ರಮ ವಹಿಸಬೇಕು.
ಇನ್ನೂ ಬಹಳಷ್ಟು ವ್ಯಾಪಾರಸ್ಥರು ಟ್ರೇಡ್ ಲೈಸೆನ್ಸ್ ಪಡೆದಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ 19 ಸಾವಿರ ಟ್ರೇಡ್ ಲೈಸೆನ್ಸ್‌ದಾರರನ್ನು ಗುರುತಿಸಲಾಗಿದ್ದು, ಈ ಪೈಕಿ 10,500 ವ್ಯಾಪಾರಸ್ಥರು ಮಾತ್ರ ಪರವಾನಗಿ ಪಡೆದಿದ್ದಾರೆ. ಉಳಿದವರು ಪರವಾನಗಿ ಇಲ್ಲದೆ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ಪಾಲಿಕೆಯ ಆದಾಯದಲ್ಲಿ ನಷ್ಟವಾಗಿದೆ. ಇವರ ವಿರುದ್ಧ ಕ್ರಮ ಕೈಗೊಂಡು, ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕಿದೆ.
ಟ್ರೇಡ್ ಲೈಸೆನ್ಸ್ ಶುಲ್ಕ ನಿಗದಿ ಕೂಡ ಅವೈಜ್ಞಾನಿಕ ಮತ್ತು ದುಬಾರಿ ಆಗಿದೆ ಎಂಬುದು ವರ್ತಕರ ಪ್ರಮುಖ ದೂರು. ಇದನ್ನು ನಿವಾರಣೆ ಮಾಡಿ ಪಾರದರ್ಶಕ ವ್ಯವಸ್ಥೆ ಕಾಯ್ದಕೊಳ್ಳಬೇಕಿದೆ.
ಟ್ರೇಡ್ ಲೈಸೆನ್ಸ್ ವ್ಯವಸ್ಥೆ ಕುರಿತು ಸಂಗ್ರಹಿಸಿರುವ ಜನಾಭಿಪ್ರಾಯ ಲೌಡ್ ಸ್ಪೀಕರ್‌ನಲ್ಲಿ ವ್ಯಕ್ತವಾಗಿದೆ.
ನಗದು ರಹಿತ ಪಾವತಿಗೆ ಉತ್ತೇಜನ
ಆನ್‌ಲೈನ್ ಆಧಾರಿತ ಈ ವ್ಯವಸ್ಥೆಯಿಂದ ಉದ್ದಿಮೆದಾರರ ಸಮಯ ಉಳಿತಾಯವಾಗುತ್ತದೆ. ಪರವಾನಗಿ ಪತ್ರವನ್ನು ಕುಳಿತಲ್ಲಿಯೇ ಯಾವ ಅಧಿಕಾರಿಗಳ ಸಹಾಯವಿಲ್ಲದೆ ಪಡೆಯಬಹುದಾಗಿದೆ. ಹಣ ಪಾವತಿಸಿದ ರಸೀದಿಯನ್ನೂ ಆನ್‌ಲೈನ್‌ನಲ್ಲೇ ಪಡೆಯಬಹುದಾಗಿದೆ. ಪರವಾನಗಿ ಪತ್ರ ಕಳೆದು ಹೋದಲ್ಲಿ ನಕಲು ಪ್ರತಿಯನ್ನೂ ಪಡೆದುಕೊಳ್ಳಬಹುದಾಗಿದೆ. ಇದು, ನಗದು ರಹಿತ ಪಾವತಿಗೆ ಉತ್ತೇಜನ ನೀಡಿದಂತೆಯೂ ಆಗುತ್ತದೆ.
ಶಿವಕುಮಾರ್, ಮೇಯರ್
ಉದ್ದಿಮೆದಾರರಿಗೆ ಉಪಯುಕ್ತ
ಮೂರು ವರ್ಷಗಳಿಂದಲೂ ಟ್ರೇಡ್ಸ್ ಲೈಸೆನ್ಸ್ ಶುಲ್ಕ ಪರಿಷ್ಕರಣೆ ಮಾಡಿಲ್ಲ. ಈಗ ತಂತ್ರಾಂಶವನ್ನಷ್ಟೇ ಅಭಿವೃದ್ಧಿಪಡಿಸಲಾಗಿದೆ. ಈ ಸರಳೀಕೃತ ವ್ಯವಸ್ಥೆ, ಪಾಲಿಕೆ ಹಾಗೂ ಉದ್ದಿಮೆದಾರರಿಗೆ ಬಹಳ ಉಪಯುಕ್ತವಾಗಿದೆ. ಜತೆಗೆ, ಸರಳವೂ ಆಗಿದೆ.
ಲಕ್ಷ್ಮೀಕಾಂತ ರೆಡ್ಡಿ, ಆಯುಕ್ತ, ಮೈಸೂರು ಮಹಾನಗರ ಪಾಲಿಕೆ
ಮೊದಲು ಲೋಪ ಸರಿಪಡಿಸಿ
ಉದ್ದಿಮೆ ಪರವಾನಗಿಯ ಶುಲ್ಕ ನಿಗದಿ ಪಡಿಸುವ ಕ್ರಮ ಸರಿ ಇಲ್ಲ. ಕೆಲವೊಮ್ಮೆ ಹೆಚ್ಚಾಗಿಯೂ ಪಡೆದುಕೊಳ್ಳಲಾಗುತ್ತಿದೆ. ಇದು ಅವೈಜ್ಞಾನಿಕ, ದುಬಾರಿಯೂ ಆಗಿದೆ. ಈ ಲೋಪವನ್ನು ಮೊದಲು ಬಗೆಹರಿಸುವ ಮೂಲಕ ವ್ಯಾಪಾರಸ್ಥರಿಗೆ ಹೊರೆಯಾಗದಂತೆ ಶುಲ್ಕ ನಿಗದಿಪಡಿಸಬೇಕು.
ಸಿ.ನಾರಾಯಣಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ
ಅನ್‌ಲೈನ್ ವ್ಯವಸ್ಥೆಯಿಂದ ಲಂಚಕ್ಕೆ ಬ್ರೇಕ್
ಟ್ರೇಡ್ ಲೈಸೆನ್ಸ್ ಪಡೆಯಲು ಪಾಲಿಕೆ ಕಚೇರಿಗೆ ಅಲೆಯಬೇಕಿತ್ತು. ಅದಕ್ಕಾಗಿ ಅಧಿಕಾರಿಗಳಿಗೆ ಇಂತಿಷ್ಟು ಲಂಚವನ್ನೂ ಕೊಡಬೇಕಿತ್ತು. ಇದಕ್ಕೆ ಒಪ್ಪದಿದ್ದರೆ ಇಲ್ಲದ ಕಾರಣ ನೀಡಿ ಪರವಾನಗಿ ಕೊಡುತ್ತಿರಲಿಲ್ಲ. ಬದಲಿಗೆ ಇನ್ನಷ್ಟು ಕಿರುಕುಳ ನೀಡುತ್ತಿದ್ದರು. ಆಲ್‌ಲೈನ್ ವ್ಯವಸ್ಥೆಯಿಂದ ಇದೆಲ್ಲ ತಪ್ಪುವ ನಿರೀಕ್ಷೆ ಇದೆ.
ಎಚ್.ಡಿ.ಶ್ರುತಿ, ವ್ಯಾಪಾರಸ್ಥೆ
ಆರ್ಥಿಕ ನಷ್ಟ ತಪ್ಪಿಸಿ
ಸಿಆರ್ ಪಡೆಯದ ಕಟ್ಟಡದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ವ್ಯಾಪಾರಸ್ಥರಿಗೆ ಹೊರೆಯಾಗಿದೆ. ಹೆಚ್ಚುವರಿ ಶುಲ್ಕ ವಿಧಿಸುವುದನ್ನು ಸರಿಪಡಿಸಬೇಕು. ಇದರೊಂದಿಗೆ ವ್ಯಾಪಾರಸ್ಥರಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಕಡಿಮೆ ಮಾಡಬೇಕು.
ಸಯ್ಯದ್, ವರ್ತಕ
ಅವೈಜ್ಞಾನಿಕ ಶುಲ್ಕ ನಿಗದಿ
ಟ್ರೇಡ್ ಲೈಸೆನ್ಸ್ ಶುಲ್ಕ ಅವೈಜ್ಞಾನಿಕವಾಗಿ ನಿಗದಿಪಡಿಸಲಾಗಿದೆ. ಯಾವ ಮಾನದಂಡದ ಮೇಲೆ ಈ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಈ ವಿಷಯದಲ್ಲಿ ಪಾಲಿಕೆ ಎಡವಿದೆ. ಲೋಪದೋಷಗಳೂ ಇವೆ. ಇದನ್ನು ಮೊದಲು ಸರಿಪಡಿಸಬೇಕು.
ಪಿ.ಪ್ರಶಾಂತ್‌ಗೌಡ, ಅಧ್ಯಕ್ಷ, ಮೈಸೂರು ಟ್ರೇಡರ್ಸ್ ಸುರಕ್ಷಾ ಕ್ಷೇಮಾಭಿವೃದ್ಧಿ ಸಂಘ
ವರ್ತಕರು, ವ್ಯಾಪಾರಿಗಳೊಂದಿಗೆ ಚರ್ಚಿಸಿ
ಉದ್ದಿಮೆ ಪರವಾನಗಿ ಶುಲ್ಕ ನಿಗದಿಪಡಿಸುವಾಗ ವರ್ತಕರು, ವ್ಯಾಪಾರಸ್ಥರ ಪ್ರತಿನಿಧಿಗಳ ವಿಶ್ವಾಸ ಪಡೆದು ಚರ್ಚಿಸಬೇಕು. ಮಹಾನಗರ ಪಾಲಿಕೆ ಸದಸ್ಯರಷ್ಟೇ ಕುಳಿತು ಚರ್ಚಿಸಿದರೆ ವರ್ತಕರ ಕಷ್ಟ ಅವರಿಗೆ ಅರ್ಥವಾಗುವುದಿಲ್ಲ. ನಗರದ ಅಭಿವೃದ್ಧಿಯಾಗುವುದು ತೆರಿಗೆ ಪಾವತಿಸುವವರಿಂದ ಮಾತ್ರ. ಹೀಗಾಗಿ, ನಮ್ಮ ಕುಂದುಕೊರತೆ ಬಗೆಹರಿಸಬೇಕು.
ಬಿ.ಎಸ್.ಪ್ರಶಾಂತ್, ಅಧ್ಯಕ್ಷ, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ
ಸರಿಯಾದ ಕ್ರಮ ಆಧರಿಸಿ
ಟ್ರೇಡ್ ಲೈಸೆನ್ಸ್‌ಗೆ 10 ಸಾವಿರ ರೂ. ಶುಲ್ಕ ಇರುವುದಕ್ಕೆ 17 ಸಾವಿರ ರೂ. ವಿಧಿಸಲಾಗಿದೆ. ಆಸ್ತಿ ಇಂತಹ ಜಾಗದಲ್ಲಿದೆ ಎನ್ನುವುದನ್ನು ಆಧರಿಸಿ ಶುಲ್ಕ ಕಟ್ಟಿಸಿಕೊಳ್ಳುವುದು ಸರಿಯಲ್ಲ. ಅವರು ಯಾವ ಮಾದರಿಯ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎನ್ನುವುದನ್ನು ಆಧರಿಸಿ ಪಡೆಯಬೇಕು.
ಎಂ.ಎನ್.ಮಹದೇವ್, ಸಾರ್ವಜನಿಕ