ವಿಜಯವಾಣಿ ಸುದ್ದಿಜಾಲ ಧಾರವಾಡ
ಮೇಲ್ದರ್ಜೆಗೇರಿದ ನಗರದ ರೈಲು ನಿಲ್ದಾಣದ ಲೋಕಾರ್ಪಣೆ ಮಂಗಳವಾರ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾನುವಾರ ನಿಲ್ದಾಣಕ್ಕೆ ಭೇಟಿ ನೀಡಿ ಸಮಾರಂಭದ ಸಿದ್ಧತೆ ಪರಿಶೀಲಿಸಿದರು.
ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವರು ನಿಲ್ದಾಣದ ಕಾಮಗಾರಿ ವೀಕ್ಷಿಸಿದರು. ಬಳಿಕ ಮಂಗಳವಾರ ಉದ್ಘಾಟನೆಗೆ ಕೇಂದ್ರ ರೈಲ್ವೆ ಸಚಿವರು ಆಗಮಿಸುವ ಹಿನ್ನೆಲೆಯಲ್ಲಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಸಲಹೆ, ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಹಾಗೂ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸೇರಿ ಸಣ್ಣ ಸಣ್ಣ ಊರಿನ ನಿಲ್ದಾಣಗಳೂ ಅಭಿವೃದ್ಧಿ ಆಗಬೇಕು ಎಂಬುದು ದಶಕಗಳ ಕಾಲದ ಆಶಯವಾಗಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಅಲ್ವ ಸ್ವಲ್ಪ ಮಂಜೂರಾಗಿತ್ತು. ಇದೀಗ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಪೂರ್ಣ ಆಶಯ ಈಡೇರಿದೆ ಎಂದರು.
ನಿಲ್ದಾಣ ಅದ್ಭುತವಾಗಿ ನಿರ್ಮಾಣವಾಗಿದೆ. ಇದು ಬರೀ ಸಿವಿಲ್ ಕಾಮಗಾರಿಗೆ ಸೀಮಿತವಾಗಿರದೆ ಅಧಿಕಾರಿಗಳ ಬುದ್ಧಿವಂತಿಕೆಗೆ ಸಹ ಸಾಕ್ಷಿಯಾಗಿದೆ. ಇನ್ನು ಧಾರವಾಡದಿಂದ ಬೆಳಗಾವಿಗೆ ಕಿತ್ತೂರ ಮಾರ್ಗ ರೈಲ್ವೆ ತೆರಳಲು ಭೂ ಸ್ವಾಧೀನ ತೊಂದರೆ ಎದುರಾಗಿತ್ತು. ಇದೀಗ ಅದು ಪರಿಹಾರವಾಗಿದ್ದು, ಡಿಸೆಂಬರ್, ಜನವರಿಯಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗುವುದು. ಚಿಕ್ಕಮಲ್ಲಿಗವಾಡ ಗ್ರಾಮದ ಜನರು ಭೂಮಿ ನೀಡಲು ಹಿಂದೇಟು ಹಾಕಿದ್ದರಿಂದ ಅವರ ಮನವೊಲಿಕೆ ಕಾರ್ಯ ಸಹ ನಡೆದಿದೆ ಎಂದರು.
ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯರಾದ ಸುರೇಶ ಬೆದರೆ, ಜ್ಯೋತಿ ಪಾಟೀಲ, ವಿಷ್ಣು ಕೊರ್ಲಹಳ್ಳಿ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ, ಸುನೀಲ ಮೋರೆ, ಶ್ರೀನಿವಾಸ ಕೋಟ್ಯಾನ, ರೈಲ್ವೆ ಅಧಿಕಾರಿಗಳು, ಇತರರು ಇದ್ದರು.