ಭದ್ರಾವತಿ: ಕಾರ್ಮಿಕ ಕುಟುಂಬಗಳನ್ನೇ ಹೆಚ್ಚು ಅವಲಂಬಿಸಿರುವ ಭದ್ರಾವತಿ ನಗರದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ನಗರದ ಜೆಪಿಎಸ್ ಕಾಲನಿ ಬೈಪಾಸ್ ರಸ್ತೆ ಬಳಿ ಕಾರ್ಮಿಕ ಸಮುದಾಯ ಭವನ ನಿರ್ಮಾಣವಾಗಿ 6 ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪ್ರಯತ್ನದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ 5 ಕೋಟಿ ರೂ. ವಿಶೇಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮೂರು ವರ್ಷಗಳ ಹಿಂದೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಶಂಕುಸ್ಥಾಪನೆ ನೆರವೇರಿಸಿದ್ದರು. ಉದ್ಘಾಟನೆಗಾಗಿ ಸ್ಥಳೀಯ ಜನಪ್ರತಿನಿಗಳು ಹಾಗೂ ಸಚಿವರ ದಿನಾಂಕಕ್ಕಾಗಿ ಕಾಯಲಾಗುತ್ತಿದೆ. ಕಟ್ಟಡ ಕಾರ್ಮಿಕರು, ಟೈಲರ್, ಮೆಕಾನಿಕ್, ಚಾಲಕರು ಸೇರಿದಂತೆ ಎಲ್ಲ ಅಸಂಘಟಿತ ಕಾರ್ಮಿಕರ ಸದ್ಬಳಕೆಗಾಗಿ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟನೆಯಾದರೆ ಕಾರ್ಮಿಕ ಸಂಘಗಳ ಚಟುವಟಿಕೆ ನಡೆಸಲು ಅವಕಾಶ ಸಿಕ್ಕಂತಾಗುತ್ತದೆ. ಅಲ್ಲದೆ ಕಾರ್ಮಿಕ ಇಲಾಖೆಯ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಕಾರ್ಮಿಕ ಸಮುದಾಯ ಭವನಕ್ಕೆ ಸ್ಥಳಾಂತರಿಸಬಹುದು. ಇದರಿಂದ ಸರ್ಕಾರಕ್ಕೆ ಬಹಳಷ್ಟು ಬಾಡಿಗೆ ಹಣ ಉಳಿತಾಯವಾಗಲಿದೆ. ಸರ್ಕಾರಿ ಕಾರ್ಯಕ್ರಮಗಳನ್ನೂ ನಡೆಸಬಹುದು. ಕಾರ್ಮಿಕ ಕುಟುಂಬಗಳ ಶುಭ ಸಮಾರಂಭಗಳಿಗೂ ಬಳಸಿಕೊಳ್ಳಬಹುದು. ಆದರೆ ಈ ಬಗ್ಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದು ಅಕಾರಿಗಳು ಹೇಳಿದ್ದಾರೆ.
ಕಾರ್ಮಿಕ ಸಮುದಾಯ ಭವನ ಉದ್ಘಾಟನೆಗೆ ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು. ಆ ವಿಚಾರಕ್ಕೆ ಚರ್ಚೆ ನಡೆಸಲಾಗುತ್ತಿದೆ. ನಗರದ ಅಂಬೇಡ್ಕರ್ ಹಾಗೂ ಕಾರ್ಮಿಕ ಭವನಗಳು ಮುಖ್ಯಮಂತ್ರಿ ಹಾಗೂ ಸಚಿವರಿಂದಲೇ ಉದ್ಘಾಟನೆ ಮಾಡಿಸಬೇಕು ಎಂಬ ಕಾರಣಕ್ಕೆ ಸ್ವಲ್ಪ ತಡವಾಗಿದೆ. ಬಿ.ಕೆ.ಸಂಗಮೇಶ್ವರ್ ಶಾಸಕ ಕಾರ್ಮಿಕ ಸಮುದಾಯ ಭವನ ಕಾಮಗಾರಿ ಸಂಪೂರ್ಣ ಮುಗಿದಿದೆ. ಉದ್ಘಾಟನೆಗೆ ದಿನಾಂಕ ನಿಗದಿಯಾಗಿಲ್ಲ. ದಿನಾಂಕ ಕುರಿತು ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಸ್ಥಳೀಯ ಜನಪ್ರತಿನಿಗಳು ದಿನಾಂಕ ನಿಗದಿ ಮಾಡಬೇಕು. ವೇಣುಗೋಪಾಲ್ ಜಿಲ್ಲಾ ಕಾರ್ಮಿಕ ಇಲಾಖೆ ಅಕಾರಿ