ತುಮಕೂರು: ರೋಗಿಗೆ ಬಳಸಿದ ಇಂಜೆಕ್ಷನ್ ಸಿರಿಂಜ್, ಔಷಧ ಬಾಟಲಿ ಸೇರಿದಂತೆ ಮೆಡಿಕಲ್ ವೇಸ್ಟ್ ತೆರವುಗೊಳಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಶುಭಕಲ್ಯಾಣ್, ಕರ್ತವ್ಯಲೋಪ ಎಸಗಿರುವ ಶುಶ್ರೂಷಕಿಯರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಶಿರಾ ನಗರದ ಸಾರ್ವಜನಿಕ ಆಸ್ಪತ್ರೆಯ ಡೇಕೇರ್ ವಿಭಾಗಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದ ಅವರು, ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ಹಾಸಿಗೆ, ಹೊದಿಕೆ ಬದಲಾಯಿಸದೆ ರೋಗಿಗೆ ಬಳಸಿದ ಔಷಧದ ಬಾಟಲಿ, ಸಿರಿಂಜ್ಗಳನ್ನು ತೆರವುಗೊಳಿಸದೆ ಹಾಗೆ ಇದ್ದುದನ್ನು ಕಂಡ ಅವರು ಶುಶ್ರೂಷಕಿಯನ್ನು ತರಾಟೆಗೆ ತೆಗೆದುಕೊಂಡರು. ರಕ್ತಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ರಕ್ತ ಶುದ್ಧಿಕರಣ ಘಟಕಕ್ಕೆ ಪ್ರತಿ ದಿನ ಇತರ ಜಿಲ್ಲೆಯ ರೋಗಿಗಳು ಬರುವುದರಿಂದ ರೋಗಿಗಳಿಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಿಸಬೇಕು. ಘಟಕಕ್ಕೆ ಹವಾ ನಿಯಂತ್ರಕಗಳನ್ನು ಸರಬರಾಜು ಮಾಡಿದ್ದರೂ ಸಹ ಇದುವರೆಗೂ ಅಳವಡಿಸಿಲ್ಲ. ಈ ದಿನವೇ ಅಳವಡಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು. ಉದಾಸೀನ ತೋರಿದರೆ ಮುಂದಿನ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದರು. ವಾರಕ್ಕೊಮ್ಮೆಯಾದರೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸ್ಥಳದಲ್ಲಿದ್ದ ತಹಸೀಲ್ದಾರ್ ಸಚ್ಚಿದಾನಂದ ಕುಚನೂರುಗೆ ನಿರ್ದೇಶನ ನೀಡಿದ ಅವರು, ತುರ್ತು ಚಿಕಿತ್ಸಾ ವಿಭಾಗದಲ್ಲಿ ಹಾವು ಕಡಿತದಿಂದ ದಾಖಲಾಗಿದ್ದ ಶಿರಾ ತಾಲೂಕು ಹೊಸಪಾಳ್ಯದ 23 ವರ್ಷದ ಧನಂಜಯ ಅವರ ಆರೋಗ್ಯ ವಿಚಾರಿಸಿದರು.
ಡ್ರೆಸ್ಸಿಂಗ್ ಕೊಠಡಿ, ಹೊರ ರೋಗಿಗಳ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಶಿರಾ ನಗರದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ
ಬಾಲಕರ ವಿದ್ಯಾರ್ಥಿ ನಿಲಯ, ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.