ಚಿತ್ರದುರ್ಗ: ವಿದ್ಯಾರ್ಥಿ ಸಮೂಹಕ್ಕೆ ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಅವಕಾಶಗಳಿವೆ. ತಮ್ಮೊಳಗಿನ ಅಗಾಧವಾದ ಶಕ್ತಿಯ ಮೂಲಕ ಪ್ರತಿಭೆ ಅನಾವರಣಗೊಳಿಸಿ, ಉದಯೋನ್ಮುಖರಾಗಿ ಹೊರಹೊಮ್ಮಿ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಲಹೆ ನೀಡಿದರು.
ತರಾಸು ರಂಗಮಂದಿರದಲ್ಲಿ ಶುಕ್ರವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ದಾವಣಗೆರೆ ವಿವಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಿಂದ ಹಮ್ಮಿಕೊಂಡಿದ್ದ ಪ್ರತಿಭೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಪಠ್ಯ-ಪಠ್ಯೇತರ ಎರಡೂ ಚಟುವಟಿಕೆ ತುಂಬಾ ಮುಖ್ಯ. ಶೈಕ್ಷಣಿಕ ಪ್ರಗತಿಯೊಂದಿಗೆ ಆರ್ಥಿಕ, ಸಾಮಾಜಿಕವಾಗಿ ಉನ್ನತಮಟ್ಟಕ್ಕೆ ಏರಲು ಪ್ರಯತ್ನಿಸಬೇಕು. ಪಾಲಕರು ಮಕ್ಕಳಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಡುತ್ತಾರೆ. ಅವರ ನಂಬಿಕೆ ಹುಸಿಯಾಗಿಸದೆ, ಸಾಧಕರಾಗಿ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಹೇಳಿದರು.
ಜೀವನದಲ್ಲಿ ಪ್ರತಿ ಹೆಜ್ಜೆಯನ್ನು ಜಾಗೃತರಾಗಿ ಇಡಬೇಕು. ಸನ್ನಡತೆ, ಸತ್ಕಾರ, ಸನ್ಮಾರ್ಗದ ಮೂಲಕ ಮಾನವ ಜನ್ಮ ಸಾರ್ಥಕ ಪಡಿಸಿಕೊಳ್ಳಲು ಮುಂದಾಗಿ ಎಂದರು.
ಕಾಲೇಜಿನ ಕಟ್ಟಡ ನಿರ್ಮಾಣ, ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಈಗಾಗಲೇ 2.24 ಗುಂಟೆ ಜಮೀನು ಮಂಜೂರಾಗಿದೆ. 25 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಮುಂಬರುವ ದಿನಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾಲೇಜು ವಿದ್ಯಾರ್ಥಿ ಸಮೂಹವನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಗತಿ ಹೊಂದಲಿದೆ ಎಂದು ಭರವಸೆ ನೀಡಿದರು.
2022-23ನೇ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಬಿ.ಕಾಂ ವಿಭಾಗದ ರುಖಾಯಾ ತಾಜೀಮ್, ಬಿ.ಎ ವಿಭಾಗದ ಎನ್.ರಕ್ಷಿತಾ ಅವರಿಗೆ, ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಪ್ರಾಂಶುಪಾಲ ಡಾ.ಎಚ್.ಗುಡ್ಡದೇಶ್ವರಪ್ಪ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಿ.ಚನ್ನಕೇಶವ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಡಿ.ಒ.ಸಿದ್ದಪ್ಪ, ಅಧ್ಯಾಪಕ ಸಂಘದ ಅಧ್ಯಕ್ಷ ಡಾ.ಪಿ.ಎನ್.ಮಧುಸೂದನ್, ಐಕ್ಯೂಎಸಿ ಸಂಚಾಲಕ ಬಿ.ಎಚ್.ಕುಮಾರಸ್ವಾಮಿ, ರಾಸೇಯೋ ಕಾರ್ಯಕ್ರಮಾಧಿಕಾರಿ ಎಂ.ಗಿರೀಶ್, ಕ್ರೀಡಾ ಸಮಿತಿ ಸಂಚಾಲಕ ಆರ್.ಶಿವಪ್ರಸಾದ್, ಪತ್ರಾಂಕಿತ ವ್ಯವಸ್ಥಾಪಕ ವೆಂಕಟೇಶ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಸಜ್ಜತ್, ಎಸ್.ಆರ್.ಮನು, ಸಮೀವುಲ್ಲಾ ಶರೀಫ್, ನರಸಿಂಹಮೂರ್ತಿ, ತಾರಕೇಶ್ವರಿ, ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಸಿದ್ದಪ್ಪ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವೀಣಾ, ಕ್ರೀಡಾ ಸಮಿತಿ ಸಂಚಾಲಕ ಡಾ.ಶಿವಪ್ರಾಸಾದ್, ಮಹಿಳಾ ಸಿರಿ ವಾರ್ಷಿಕ ಸಂಚಿಕೆ ಸಂಪಾದಕ ಬಿ.ಮಂಜುನಾಥ್ ಇತರರಿದ್ದರು.