ಮೈಸೂರು: ವಿವಾದಿತ ಪೋಸ್ಟ್ ಹಾಕಿ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟಕ್ಕೆ ಕಾರಣನಾದ ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗನ ಜಾಮೀನು ಅರ್ಜಿ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಲಾಗಿದೆ.
ಪ್ರಕರಣ ಸಂಬಂಧ ಜಾಮೀನು ನೀಡುವ ಆದೇಶವನ್ನು ಕಾಯ್ದಿರಿಸಿದ್ದ 2ನೇ ಅಪರ ಸಿವಿಲ್ ಕಿರಿಯ ಶ್ರೇಣಿ ನ್ಯಾಯಾಲಯವು ಶನಿವಾರ ಪ್ರಕರಣದ ಸಂಬಂಧ ಮತ್ತೆ ವಿಚಾರಣೆ ನಡೆಸಿತು.
ಸರ್ಕಾರಿ ಅಭಿಯೋಜಕಿಯಾದ ಸವಿತಾ ಅವರು ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿ, ಜಾಮೀನು ನೀಡಿದರೆ ಸಮಾಜದಲ್ಲಿ ಶಾಂತಿ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿ ಜಾಮೀನಿಗೆ ವಿರೋಧಿಸಿದರು. ಜತೆಗೆ, ಮತ್ತಷ್ಟು ವಾದ ಮಂಡನೆಗೆ ಕಾಲಾವಕಾಶಬೇಕು ಎಂದು ಕೋರಿಕೊಂಡರು.
ಆರೋಪಿ ಪರ ವಾದ ಮಂಡಿಸಿದ ವಕೀಲ ಅ.ಮ.ಭಾಸ್ಕರ್, ಬಂಧನ ಸಂಬಂಧ ಪೊಲೀಸರು ಸಮರ್ಪಕ ಸಾಕ್ಷಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಯಾವ ಕಾರಣದಿಂದ ಒಂದು ಧರ್ಮದ ಜನರ ಭಾವನೆಗೆ ಧಕ್ಕೆ ಆಗುತ್ತದೆ ಎಂಬುದನ್ನು ಪ್ರಕರಣದಲ್ಲಿ ಉಲ್ಲೇಖಿಸಿಲ್ಲ. ಈಗಾಗಲೇ ಪೊಲೀಸರು ಆರೋಪಿಯ ವಿಚಾರಣೆ ಮಾಡಿ ಪೂರ್ಣಗೊಳಿಸಿದ್ದಾರೆ. ಜತೆಗೆ ಪೋಸ್ಟ್ ಹಾಕಲಾಗಿದೆ ಎನ್ನಲಾದ ಮೊಬೈಲ್‌ನನ್ನು ಜಪ್ತಿ ಮಾಡಿದ್ದಾರೆ. ಆದ್ದರಿಂದ ಆರೋಪಿಗೆ ಜಾಮೀನು ನೀಡಬೇಕು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿದರು. ಜತೆಗೆ ಮುಚ್ಚಿದ ಲಕೋಟೆಯಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿದರು. ಪೋಸ್ಟ್‌ನಲ್ಲಿರುವ ಪದಗಳನ್ನು ಕನ್ನಡಕ್ಕೆ ಭಾಷಾಂತರ ಮಾಡುವಂತೆಯೂ ನಿರ್ದೇಶಿಸಿದರು.