ಜಿಲ್ಲೆ

ಉದಯಗಿರಿ ಪ್ರಕರಣ: ಪೋಸ್ಟರ್‌ನ ಮೂಲ ಶೋಧ; ಮಹತ್ವ ಮಾಹಿತಿ ಲಭ್ಯ

ಮೈಸೂರು: ಅವಹೇಳನಕಾರಿ ಪೋಸ್ಟರ್‌ನ ಮೂಲ ಶೋಧಿಸುವ ಕೆಲಸದಲ್ಲಿ ಸಿಸಿಬಿ ಪೊಲೀಸರು ನಿರತರಾಗಿದ್ದಾರೆ. ಕೆಲ ಮಹತ್ವದ ಮಾಹಿತಿ ದೊರೆತಿದೆ.

ಪ್ರಕರಣ ಸಂಬಂಧ ಪೊಲೀಸರು ಬಂಧಿರುವ ಕಲ್ಯಾಣಗಿರಿಯ ಸತೀಶ್ ಅಲಿಯಾಸ್ ಪಾಂಡುರಂಗ ಅವರ ಡ್ರೈ ಫ್ರೂಟ್ಸ್ ಮಾರಾಟದ ಅಂಗಡಿ ನೌಕರರೇ ಈ ಕೃತ್ಯ ಎಸಗಿರಬಹುದು. ಸತೀಶ್ ಅವರ ಗಮನಕ್ಕೆ ಬಾರದೇ ಪೋಸ್ಟರ್ ಹಾಕಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಪ್ರಕರಣಕ್ಕೆ ತಿರುವು ಕೊಟ್ಟಿದೆ.

ಈ ಹಿನ್ನೆಲೆಯಲ್ಲಿ ಡ್ರೈ ಫ್ರೂಟ್ಸ್ ಘಟಕದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಕೆಲ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಅವಹೇಳನಕಾರಿ ಪೋಸ್ಟರ್ ಮೂಲ ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ.

ಆರೋಪಿಯ ಅಂಗಡಿ ಮತ್ತು ಪ್ಯಾಕಿಂಗ್ ಯೂನಿಟ್‌ನಲ್ಲಿ 300 ಜನ ನೌಕರರು ಕೆಲಸ ಮಾಡುತ್ತಿದ್ದಾರೆ. ವ್ಯಾವಹಾರಿಕವಾಗಿ ಕೆಲವರು ಸತೀಶ್ ಅವರ ಮೊಬೈಲ್ ಅನ್ನು ಸಹ ಉಪಯೋಗಿಸುತ್ತಾರೆ.

ಈ ಅವಕಾಶ ಬಳಸಿಕೊಂಡು ಬೇರೆ ಎಲ್ಲಿಂದಲ್ಲೋ ಬಂದ ಅಥವಾ ಸಿದ್ಧಪಡಿಸಿದ ಅವಹೇಳನಕಾರಿ ಪೋಸ್ಟರ್ ಅನ್ನು ಆರೋಪಿಯ ಮೊಬೈಲ್‌ಗೆ ಕಳುಹಿಸಿ ಅಲ್ಲಿಂದ ಅದನ್ನು ಅವರ ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿರಬಹುದು.

ಈ ಮೂಲಕ ಸತೀಶ್ ಅವರೇ ಕೃತ್ಯ ನಡೆಸಿದ್ದಾರೆ ಎಂಬುದನ್ನು ಬಿಂಬಿಸಲು ಹೊರಟಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ತನಿಖೆ ಕೈಗೊಂಡಿದ್ದಾರೆ.