ಜಿಲ್ಲೆ

ಉದಯಗಿರಿ ಪೊಲೀಸ್ ಠಾಣೆ ಸರಹದ್ದು ವಿಭಜನೆ

ಮೈಸೂರು: ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಉದಯಗಿರಿ ಪೊಲೀಸ್ ಠಾಣೆಯನ್ನು ವಿಭಜನೆ ಮಾಡಲಾಗಿದೆ.

ಈ ಠಾಣಾ ವ್ಯಾಪ್ತಿ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಉದಯಗಿರಿ ಪೊಲೀಸ್ ಠಾಣೆಯ ಸರಹದ್ದನ್ನು ‘ಉದಯಗಿರಿ ಉತ್ತರ’ ಮತ್ತು ‘ಉದಯಗಿರಿ ದಕ್ಷಿಣ’ ಎಂದು ಪ್ರತ್ಯೇಕಿಸಲು ಅನುಮತಿ ನೀಡಿ ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಮೈಸೂರು ನಗರದಲ್ಲಿ ಪೊಲೀಸ್ ಠಾಣೆಗೆ ಸಂಖ್ಯೆ 18ರಿಂದ 19ಕ್ಕೆ ಹೆಚ್ಚಳವಾಗಿದೆ.

ಪ್ರಸ್ತುತ ಉದಯಗಿರಿ ಠಾಣೆಯಲ್ಲಿ(ದಕ್ಷಿಣ) ಇನ್ಸ್‌ಪೆಕ್ಟರ್-1, ಎಸ್‌ಐ-4, ಎಎಸ್‌ಐ-8, ಎಚ್‌ಸಿ-24, ಪಿಸಿ-48 ಸಿಬ್ಬಂದಿ ಇದ್ದಾರೆ. ಹೊಸ ಉದಯಗಿರಿ ಠಾಣೆಯಲ್ಲಿ(ಉತ್ತರ) ಇನ್ಸ್‌ಪೆಕ್ಟರ್-1, ಎಸ್‌ಐ-4, ಎಎಸ್‌ಐ-8, ಎಚ್‌ಸಿ-24, ಪಿಸಿ-48, ಎಪಿಸಿ-2 ಹುದ್ದೆಗಳು ಸೃಷ್ಟಿಸಲಾಗುತ್ತದೆ.

ಕೋಮು ಸೂಕ್ಷ್ಮ ಪ್ರದೇಶವಾಗಿರುವ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಅಪರಾಧ ಕೃತ್ಯ, ಕೋಮು ಗಲಭೆ, ಜಾತಿ-ಧರ್ಮಗಳ ನಡುವಿನ ವಿವಾದ, ಕೊಲೆ, ಕೊಲೆ ಯತ್ನ ಪ್ರಕರಣಗಳು ಹೆಚ್ಚಾಗಿವೆ. ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕಾರ್ಯ ಒತ್ತಡ ಅಧಿಕವಾಗಿದೆ. ಆದ್ದರಿಂದ ಸ್ಥಳೀಯ ಶಾಸಕರಾದ ತನ್ವೀರ್ ಸೇಠ್ ಅವರು ಉದಯಗಿರಿ ಠಾಣೆಯನ್ನು ಪ್ರತ್ಯೇಕಗೊಳಿಸಿ ಎರಡು ಠಾಣೆ ಮಾಡುವಂತೆ ಸರ್ಕಾರವನ್ನು ಮನವಿ ಸಲ್ಲಿಸಿದ್ದರು.

ಹಾಲಿ ಇರುವ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 78 ಮಸೀದಿಗಳು, 59 ದೇವಸ್ಥಾನಗಳು ಮತ್ತು 9 ಚರ್ಚ್‌ಗಳು ಇವೆ. ಹಾಲಿ ಇರುವ ಉದಯಗಿರಿ ಪೊಲೀಸ್ ಠಾಣೆಯ ಕಟ್ಟಡವನ್ನು ಉದಯಗಿರಿ ದಕ್ಷಿಣ ಪೊಲೀಸ್ ಠಾಣೆಯಾಗಿ ಬದಲಾಯಿಸಬಹುದಾಗಿದೆ. ದೇವನೂರು 1ನೇ ಹಂತದಲ್ಲಿನ ಸಿಎ ನಿವೇಶನದಲ್ಲಿ ಹೊಸ ಪೊಲೀಸ್ ಠಾಣೆ ನಿರ್ಮಿಸಬಹುದು ಎಂದು ಮೂಲಗಳು ತಿಳಿಸಿವೆ.

ಉದಯಗಿರಿ ಪೊಲೀಸ್ ಠಾಣೆಗೆ ಸೇರಿದ ಅರ್ಧ ಪ್ರದೇಶವನ್ನು ಹೊಸದಾಗಿ ರಚನೆಯಾಗಲಿರುವ ಉದಯಗಿರಿ ಉತ್ತರ ಪೊಲೀಸ್ ಠಾಣೆಗೆ ಸೇರ್ಪಡೆಗೊಳಿಸಲಾಗುತ್ತದೆ. ಇದರೊಂದಿಗೆ ನರಸಿಂಹರಾಜ ಪೊಲೀಸ್ ಠಾಣೆಗೆ ಸೇರಿದ ಒಂದು ಬಡಾವಣೆಯನ್ನು ಹೊಸ ಠಾಣೆ ವ್ಯಾಪ್ತಿಗೆ ಸೇರಿಸಲಾಗುತ್ತದೆ.

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಉದಯಗಿರಿ ಪೊಲೀಸ್ ಠಾಣೆಯನ್ನು ಕಾನೂನು ಸುವ್ಯವಸ್ಥೆ ನಿರ್ವಹಣೆ ದೃಷ್ಟಿಯಿಂದ ಪ್ರತ್ಯೇಕಗೊಳಿಸಿ ಎರಡು ಠಾಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದೀಗ ಹೊಸ ಠಾಣೆ ಸ್ಥಾಪಿಸಲು ಅನುಮೋದನೆ ದೊರೆತಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.