ಮೈಸೂರು: ಉದಯಗಿರಿಯಲ್ಲಿ ನಡೆದ ಪ್ರಕರಣ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ. ಇದು ಪೂರ್ವ ನಿಯೋಜಿತ ಕೃತ್ಯ. ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಯ ಮುಂದುವರಿದ ಭಾಗವೇ ಉದಯಗಿರಿ ಘಟನೆಯಾಗಿದೆ. ಗೃಹ ಸಚಿವರು ಅಸಹಾಯಕತೆಯಿಂದ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ಈ ಸರ್ಕಾರದಲ್ಲಿ ಅಧಿಕಾರಿಗಳು, ಜನಸಾಮಾನ್ಯರು, ಪೊಲೀಸರಿಗೂ ರಕ್ಷಣೆ ಇಲ್ಲ. ಈ ಸರ್ಕಾರ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ನಾವು ಯೋಚನೆ ಮಾಡಬೇಕು ಎಂದು ಕುಟುಕಿದರು.
ಎಸ್‌ಸಿ-ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ. ಮಾತೆತ್ತಿದರೆ ಈ ಸಮುದಾಯದ ಜತೆಗೆ ಇದ್ದೇವೆ ಎನ್ನುತ್ತಾರೆ. ಕೇವಲ ಚುನಾವಣೆಯಲ್ಲಿ ವೋಟ್ ಬ್ಯಾಂಕ್‌ಗೋಸ್ಕರ ಇದ್ದಾರಾ? ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದರು. ಈಗಿನ ಸರ್ಕಾರದ ಕಮಿಷನ್‌ಗೆ ಮಿತಿಯೇ ಇಲ್ಲ ಎಂದು ದೂರಿದರು.
ಬಿಡದಿಯ ಕೇತುಗಾನಹಳ್ಳಿಯಲ್ಲಿ ನಾವು ಯಾರಿಗೂ ಮೋಸ ಮಾಡಿ, ಅಕ್ರಮ ಎಸಗಿ ಜಮೀನು ತೆಗೆದುಕೊಂಡಿಲ್ಲ. ಕುಮಾರಸ್ವಾಮಿ ಅವರ ಹೆಸರಿನಲ್ಲಿ ಇರುವ ಒಂದೇ ಒಂದು ಆಸ್ತಿ ಅದು. ನಾವ್ಯಾರು ಅಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ಕಟ್ಟಿ ಬಾಡಿಗೆ ತೆಗೆದುಕೊಳ್ಳುತ್ತಿಲ್ಲ. ಕುಮಾರಣ್ಣ ನಾವು ಅಲ್ಲಿ ಕೃಷಿ ಮಾಡುತ್ತಿದ್ದೇವೆ ಎಂದರು.
ಶಾಸಕ ಜಿ.ಟಿ.ದೇವೇಗೌಡರು ಹಿರಿಯರು. ನಮ್ಮ ಪಕ್ಷದ ಚಿಹ್ನೆ ಅಡಿಯಲ್ಲಿ ಗೆದ್ದಿದ್ದಾರೆ. ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದೇನೆ ಎಂದಿದ್ದಾರೆ. 2025ರ ಮೊದಲ ಕರೆ ನನ್ನದು ಹೋಗಿದ್ದು ಜಿಟಿಡಿಗೆ. ನನ್ನ ಚನ್ನಪಟ್ಟಣ ಚುನಾವಣೆ ಅನಿರೀಕ್ಷಿತ. ಎಲ್ಲರೂ ಬಂದು ಚುನಾವಣೆಗೆ ಪ್ರಚಾರ ಕೈಗೊಂಡರು. ಜಿಟಿಡಿ ನನ್ನ ಕರೆದಿಲ್ಲ ಎಂದು ಎಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿದೆ. ಎಲ್ಲವೂ ಅಧಿಕಾರಿಗಳ ತಪ್ಪು ಎಂದು ಹೇಳಿದ್ದಾರೆ. ಅಧಿಕಾರಿಗಳ ತಪ್ಪಿನ ಹಿಂದೆ ಯಾರು ಇದ್ದಾರೆ? ಬೆನ್ನ ಹಿಂದೆ ಇದ್ದ ಬಲಿಷ್ಠರು ಯಾರು? ಲೋಕಾಯುಕ್ತರು ಸಿಎಂ ಕೈ ಕೆಳಗೆ ಇರುವುದರಿಂದ ಇನ್ನೆಲ್ಲಿ ನ್ಯಾಯ ದೊರೆಯುತ್ತದೆ ಎಂದು ಹೇಳಿದರು. ಇದೇ ಸಿದ್ದರಾಮಯ್ಯ ಈ ಹಿಂದೆ ಲೋಕಾಯುಕ್ತದ ಹಲ್ಲು ಕಿತ್ತು ಹಾಕಿದ್ದರು ಎಂದು ಟೀಕಿಸಿದರು.
ಬೆಳಗಾವಿಯಲ್ಲಿ ಮರಾಠಿಗರ ಗಲಾಟೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕನ್ನಡಿಗರು ಸ್ವಾಭಿಮಾನಿಗಳು. ನಾವು ಎದ್ದೇಳುವ ಮುನ್ನ ಸರ್ಕಾರಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.