ಅರಕಲಗೂಡು: ತಾಲೂಕಿನ ರಾಮನಾಥಪುರದ ಉತ್ತರಾದಿ ಮಠದಲ್ಲಿ ಗುರುವಾರ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ವಾರ್ಷಿಕ ಆರಾಧನಾ ಮಹೋತ್ಸವ ಪ್ರಯುಕ್ತ ವಿವಿಧ ಪೂಜಾ ವಿಧಾನಗಳು ನೆರವೇರಿದವು.
ಬೆಳಗ್ಗೆ ಸುಪ್ರಭಾತ ಸೇವೆ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಡೆಯಿತು. ರಾಘವೇಂದ್ರ ಮಠದ ವ್ಯವಸ್ಥಾಪಕ ಕನಕಾಚಾರ್ಯರ ಧಾರ್ಮಿಕ ಮುಖಂಡತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ರಾಘವೇಂದ್ರ ಸ್ವಾಮಿಗಳ 352ನೇ ವಾರ್ಷಿಕ ಆರಾಧನಾ ಮಹೋತ್ಸವ ಅಂಗವಾಗಿ ಬುಧವಾರ ರಾತ್ರಿ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ವಿಭುದೇಶ ಮಂಟಪದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಪಾರುಪತ್ತೇದಾರ್ ರಮೇಶ್ ಭಟ್ ನಲ್ಲಿತೀರ್ಥ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ಸಮಾಜ ಸೇವಕರಾದ ಶ್ರೀನಾಥ್, ಪ್ರವೀಣ್, ಪ್ರಕಾಶ್, ಸಿದ್ದಯ್ಯ, ಧರ್ಮ, ಸತೀಶ್ ಮತ್ತಿತರರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.