ಜಿಲ್ಲೆ

ಉತ್ತರ ಕರ್ನಾಟಕದಲ್ಲೇ ಮೀರಾ ಚಿತ್ರೀಕರಣ

ಹುಬ್ಬಳ್ಳಿ: ಎನ್.ಎಸ್. ಮೂವೀಸ್ ಬ್ಯಾನರ್ ಅಡಿ ನಿರ್ವಿುಸುತ್ತಿರುವ ‘ಮೀರಾ’ ಸಿನಿಮಾ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಸಂಪೂರ್ಣ ಚಿತ್ರವನ್ನು ಉತ್ತರ ಕರ್ನಾಟಕದಲ್ಲೇ ಚಿತ್ರೀಕರಿಸಲಾಗುವುದು ಎಂದು ನಿರ್ದೇಶಕ ನಜೀರ್ ಕೆ.ಎನ್. ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಾಚಾರದ ವಿರುದ್ಧ ಹೋರಾಡುವ ಬಾಲಕಿಯ ಕಥಾ ಹಂದರ ಸಿನಿಮಾದಲ್ಲಿದೆ. ಸಂಪೂರ್ಣ ಉತ್ತರ ಕರ್ನಾಟಕ ಭಾಗದ ಕಲಾವಿದರು ನಟಿಸುತ್ತಿದ್ದಾರೆ. ನಾಯಕಿಯಾಗಿ ಬೆಳಗಾವಿಯ ಸೈನಾ ದರಿಗೌಡ, ಮೀರಾ ಪಾತ್ರದಲ್ಲಿ ಚಿನ್ಮಿಯಿ ಕುಂಬಾರ ಆಯ್ಕೆಯಾಗಿದ್ದಾರೆ. ರಾಧಾಕೃಷ್ಣ ಬಸ್ರೂರ ಸಂಗೀತ, ಜೀವಿ ನಾಗರಾಜ ಛಾಯಾಗ್ರಹಣ ಇರಲಿದೆ. ಮುಂದಿನ ತಿಂಗಳು ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದರು.

‘ಮೂರನೇ ಕಣ್ಣು’ ಚಿತ್ರದಲ್ಲಿ ಪ್ರಥಮ ಬಾರಿಗೆ ಮಂಗಳಮುಖಿಯನ್ನು ಚಿತ್ರದ ನಾಯಕಿಯನ್ನಾಗಿ ಪರಿಚಯಿಸಿದ ಖ್ಯಾತಿ ಪಡೆದಿರುವ ನಜೀರ್, ಇದೀಗ ಸಾಮಾಜಿಕ ಕಳಕಳಿಯ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಮೀರಾ ಪಾತ್ರದಾರಿ ಚಿನ್ಮಯೀ ಕುಂಬಾರ, ನಾಯಕಿ ಸೈನಾ ದರಿಗೌಡ ಇತರರು ಇದ್ದರು.