ಜಿಲ್ಲೆ

ಉತ್ತರ ಕರ್ನಾಟಕಕ್ಕೆ ಎಲ್ಲಿ ಆಗಿದೆ ಅನ್ಯಾಯ..?

ಬಾಗಲಕೋಟೆ: ಉತ್ತರ ಕರ್ನಾಟಕಕ್ಕೆ ಎಲ್ಲ ಸರ್ಕಾರಗಳಿಂದ ಅನ್ಯಾಯ ಆಗುತ್ತಿದೆ ಎನ್ನುವ ಕೂಗನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಲ್ಲಗಳೆದಿದ್ದಾರೆ.

ಬಾಗಲಕೋಟೆಯಲ್ಲಿ ಕೃಷ್ಣಾ ಮೇಲೆಂಡೆ ಮುಳುಗಡೆ ಸಂತ್ರಸ್ತರ ಕಳೆದ ಆರು ದಿನಗಳಿಂದ ನಡೆಸಿರುವ ಆಹೋರಾತ್ರಿ ಧರಣಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದರು.

ಕಲಬುರಗಿ, ರಾಯಚೂರ ಪ್ರದೇಶಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿಲ್ಲವೇನು? ಇದು ಅಭಿವೃದ್ಧಿ ಅಲ್ಲವೇನು? ಮತ್ತೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಲ್ಲಿ ಆಗಿದೆ ಎಂದು ಮರು ಪ್ರಶ್ನೆ ಮಾಡಿದರು.

ಉತ್ತರ ಕರ್ನಾಟಕ್ಕೆ ಅನ್ಯಾಯ ಆಗಿದೆ ಎನ್ನುವ ಭಾವನೆ ಎಲ್ಲೋ ಒಂದು ಕಡೆಗೆ ಬಂದಿದೆ. ಇದು ಅಂಕಿ ಸಂಖ್ಯೆಗಳನ್ನು ನೋಡಿದಾಗ ನಾವು ಕಡಿಮೆ ಇದ್ದೇವೆ ಎನ್ನಿಸುತ್ತದೆ. ಉತ್ತರ ಕರ್ನಾಟಕದಲ್ಲಿ ಹಿಡಕಲ್ ಡ್ಯಾಂ, ಆಲಮಟ್ಟಿ ಜಲಾಶಯ, ನಾರಾಯಣಪುರ ಡ್ಯಾಂ ಆಗಿವೆ, ಸಕ್ಕರೆ ಕಾರ್ಖಾನೆಗಳು ಇವೆ. ಆದರೆ, ಅಭಿವೃದ್ಧಿಯಲ್ಲಿ ಇನ್ನೂ ಆಗಬೇಕು ಎಂದರು.

ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಿನ್ನೆಡೆ ವಿಚರವಾಗಿ ಪ್ರತ್ಯೇಕ ರಾಜ್ಯದ ಬೇಡಿಕೆಯೂ ಕೇಳಿ ಬರುತ್ತಿರುವ ಬಗ್ಗೆ, ಆಗೊಮ್ಮೆಡ, ಹೀಗೊಮ್ಮೆ ಅಲ್ಲೊಬ್ಬರು ಇಲ್ಲೊಬ್ಬರು ಪ್ರತ್ಯೇಕ ರಾಜ್ಯದ ಮಾತು ಹೇಳುತ್ತಾರೆ. ೧೯೮೯ರಲ್ಲಿ ನಾನು ಮೊದಲ ಸಲ ಶಾಸಕ ಆಗಿದ್ದಾಗ ನಾನು ಆ ಹೋರಾಟ ಮಾಡಿದ್ದೆ. ಈಗ ಅದು ಎಷ್ಟರ ಮಟ್ಟಿಗೆ ಸರಿ ಎನ್ನುವ ಕುರಿತು ಚರ್ಚೆ ಅಗಬೇಕು. ಕೆಲ ವಿಚಾರದಲ್ಲಿ ತಾರತಮ್ಯೆ ಆಗಿದೆ ಎನ್ನುವ ವಿಚಾರಗಳು ಬರುತ್ತಿವೆ ಎಂದು ಹೇಳಿದರು.

ಬೆಂಗಳೂರ ಅಭಿವೃದ್ಧಿಗೆ ಹತ್ತಿಪ್ಪತ್ತು ಸಾವಿರ ಕೋಟಿ ರೂ. ಕೊಡುವ ಸರ್ಕಾರಕ್ಕೆ ಉತ್ತರ ಕರ್ನಾಟಕದ ಯೋಜನೆಗಳಿಗೆ ದುಡ್ಡು ಯಾಕೆ ಇರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದು ಕಮರ್ಷಿಯಲ್ ಏರಿಯಾ, ಅಲ್ಲಿ ಮಹಾನಗರ ಪಾಲಿಕೆ, ಬಿಡಿಎ ಈ ತರಹ ಅನೇಕ ಇವೆ. ಸರ್ಕಾರವೇ ಅಲ್ಲಿಗೆ ವಿಶೇಷವಾಗಿ ಅನುದಾನ ಕೊಡುತ್ತಿದೆ. ನಮ್ಮಲ್ಲಿಗೂ ಕೊಡಿ ಎಂದು ಕೇಳೋಣ ಬಿಡಿ ಎಂದರು.