ವಿಜಯಪುರ: ಉತ್ತರ ಕರ್ನಾಟಕದ ಅಭಿವೃದ್ಧಿ ಕುಂಟಿತವಾಗುತ್ತಿದೆ. ಅಭಿವೃದ್ಧಿಗಾಗಿ ಗಮನ ಸೆಳೆಯಲು ಜನೆವರಿ 20ರಿಂದ ಪಾದಯಾತ್ರೆ ನಡೆಸುವುದಾಗಿ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘ ತಿಳಿಸಿದೆ. ಅಂದು ವಿಶ್ವಗುರು ಬಸವಣ್ಣನ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಬೆಂಗಳೂರಿನ ವರೆಗೆ ಬರೋಬ್ಬರಿ 54 ದಿನ ಪಾದಯಾತ್ರೆ ನಡೆಸಲಾಗುತ್ತಿದೆ. ಒಟ್ಟು 575 ಕಿಲೋಮೀಟರ್ ಪಾದಯಾತ್ರೆಯಲ್ಲಿ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತರು, ಕಾರ್ಮಿಕರು ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ ಜವಳಿ ನೇತ್ರತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ.ಉತ್ತರ ಕರ್ನಾಟಕದ ನಿರ್ಲಕ್ಷಕ್ಕೆ ಉತ್ತರ ಕೊಡಿ ಎಂಬ ಅಭಿಯಾನದಲ್ಲಿ ಈ ಭಾಗದ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಲಾಗುವುದು. ಈ ಪಾದಯಾತ್ರೆಯಲ್ಲಿ ಪ್ರತಿ ಜಿಲ್ಲೆಯಿಂದ 300ಜನರು ಭಾಗವಹಿಸಲಿದ್ದು, ಒಟ್ಟು 5 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರಲಿದೆ ಎಂದು ಯಾಸೀನ ಜವಳಿ ತಿಳಿಸಿದ್ದಾರೆ. ಮೊದಲಿನಿಂದಲೂ ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುತ್ತಲೇ ಬಂದಿವೆ. ಇನ್ನು ಮುಂದಾದ್ರೂ ಈ ಭಾಗದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ಶ್ರಮಿಸಬೇಕು ಎಂದು ಅವರು ಆಗ್ರಹಿಸಿದ್ರು.