ಹುಬ್ಬಳ್ಳಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಎರಡು ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ರ್ಚಚಿಸಲು ವಿಶೇಷ ಸಮಯಾವಕಾಶ ಕಲ್ಪಿಸಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಇಲ್ಲವೇ ಬುಧವಾರ ಚರ್ಚೆಗೆ ಅವಕಾಶ ನೀಡಲಾಗುತ್ತಿದೆ. ಮಹದಾಯಿ ಕುಡಿಯುವ ನೀರಿನ ಯೋಜನೆ, ಗಡಿ ವಿವಾದ ಸೇರಿದಂತೆ ಬಹಳಷ್ಟು ವಿಷಯಗಳ ಬಗ್ಗೆ ರ್ಚಚಿಸಲಾಗುವುದು ಎಂದರು.
ಸದನ ಆರಂಭವಾದ ತಕ್ಷಣ ಚರ್ಚೆ ನಡೆಯಲಿದೆ. ಆಗ ಸಂಬಂಧಿಸಿದ ಸಚಿವರು ಕಡ್ಡಾಯವಾಗಿ ಇರಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಸದಸ್ಯರ ಪ್ರಶ್ನೆಗೆ ಉತ್ತರಿಸಬೇಕು. ಕನಿಷ್ಠ 15 ದಿನ ಅಧಿವೇಶನ ನಡೆಯಬೇಕು. ಇನ್ನಷ್ಟು ದಿನಗಳ ವಿಸ್ತರಣೆಗೆ ಸಚಿವ ಸಂಪುಟದ ಒಪ್ಪಿಗೆ ಬೇಕಾಗುತ್ತದೆ. ಸರ್ಕಾರವೇ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಸಭೆಯಲ್ಲಿ ಅನಗತ್ಯ ಗೊಂದಲ-ಗಲಾಟೆ, ಕಲಾಹರಣಕ್ಕೆ ಅವಕಾಶ ಕೊಡುವುದಿಲ್ಲ. ಎಲ್ಲ ರೀತಿಯಿಂದ ನಿಯಂತ್ರಿಸಿ, ಸದನದ ಕಾರ್ಯಕಲಾಪ ಸುಗಮವಾಗಿ ನಡೆಸಲಾಗುವುದು ಎಂದರು.