ಕಾರವಾರ: ಉತ್ತರ ಕನ್ನಡಕ್ಕೆ ಮಹಾರಾಷ್ಟ್ರದಿಂದ ಮಹಾಮಾರಿಯ ಆಪತ್ತು ಮುಂದುವರಿದಿದೆ. ಆ ರಾಜ್ಯದಿಂದ ಬಂದ ಮೂವರು ಮಕ್ಕಳು ಸೇರಿ ಒಟ್ಟು 6 ಜನರಲ್ಲಿ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ.
ಇದುವರೆಗೂ ಸೋಂಕು ತಟ್ಟಿಸಿಕೊಳ್ಳದ ಸಿದ್ದಾಪುರಕ್ಕೂ ಬುಧವಾರ ಕೋವಿಡ್-19 ವಿಸ್ತರಿಸಿದೆ. ಮಹಾರಾಷ್ಟ್ರದಿಂದ ಮೂವರು ಮಕ್ಕಳು ಹಾಗೂ ಪತ್ನಿಯ ಜತೆ ಆಗಮಿಸಿ, ಕಾವಂಚೂರು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದ 52 ವರ್ಷದ ವ್ಯಕ್ತಿಗೆ (ಪಿ-2398) ಕರೊನಾ ಖಚಿತವಾಗಿದೆ. ಪತ್ನಿ ಮತ್ತು ಮಕ್ಕಳ ವರದಿ ಬರುವುದು ಬಾಕಿ ಇದೆ. ಸಿದ್ದಾಪುರದ ಜನರಲ್ಲಿ ಇದು ಆತಂಕಕ್ಕೆ ಕಾರಣವಾಗಿದೆ.
ಮತ್ತೆ ನಾಲ್ವರಿಗೆ: ಯಲ್ಲಾಪುರದ ಎರಡು ಕುಟುಂಬಗಳ ಒಟ್ಟು ನಾಲ್ವರಿಗೆ ಕರೊನಾ ಇರುವುದು ಖಚಿತವಾಗಿದೆ. ಮೇ 19ರಂದು ಮುಂಬೈನಿಂದ ಆಗಮಿಸಿ, ಕಿರವತ್ತಿ ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದ 26 ವರ್ಷದ ಯುವಕ (ಪಿ-2291), 9 ವರ್ಷದ ಬಾಲಕ (ಪಿ-2399), ಹಾಗೂ 4 ವರ್ಷದ ಇನ್ನೊಬ್ಬ ಬಾಲಕ (ಪಿ-2400)ನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇನ್ನು ಕುಟುಂಬದ ಜತೆ ಮೇ 14 ರಂದು ಆಗಮಿಸಿ, ಯಲ್ಲಾಪುರ ಮುರಾರ್ಜಿ ಹಾಸ್ಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದ 12 ವರ್ಷದ ಬಾಲಕಿಗೂ(ಪಿ-2284) ಕರೊನಾ ಇರುವುದು ಕಂಡುಬಂದಿದೆ. ಒಟ್ಟಾರೆ ಯಲ್ಲಾಪುರದಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ.
ಹೊನ್ನಾವರದಲ್ಲಿ 9: ಹೊನ್ನಾವರದಲ್ಲಿ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ 24 ವರ್ಷದ ಯುವಕನಲ್ಲಿ (ಪಿ-2397) ಸೋಂಕು ಬುಧವಾರ ದೃಢಪಟ್ಟಿದೆ. ಜಿಲ್ಲೆಯ ಇದುವರೆಗಿನ ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಅದರಲ್ಲಿ 41 ಜನರು ಬಿಡುಗಡೆಯಾಗಿದ್ದು, 34 ರೋಗಿಗಳು ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
129 ಮಂದಿ ಮಹಾರಾಷ್ಟ್ರದವರು: ಸಿದ್ದಾಪುರ ತಾಲೂಕಿನಲ್ಲಿ ಹೊರ ರಾಜ್ಯಗಳಿಂದ ಆಗಮಿಸಿದ್ದ 149 ಜನರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದ್ದು, ಅವರಲ್ಲಿ ಮಹಾರಾಷ್ಟ್ರದ 129 ಜನರಿದ್ದಾರೆ ಎಂದು ಶಿರಸಿ ಎಸಿ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ. ಗುಜರಾತ್, ಕೇರಳ, ನವದೇಹಲಿಯ ತಲಾ ಮೂವರು ಮತ್ತು ತೆಲಂಗಾಣದ 13ಜನರಿದ್ದಾರೆ. ಅವರಲ್ಲಿ 39ಜನರ ಮೊದಲ ತಪಾಸಣಾ ವರದಿ ನೆಗೆಟಿವ್ ಬಂದಿದ್ದು, 14 ದಿನ ಪೂರೈಸಿದವರನ್ನು ಮನೆಗಳಿಗೆ ಕಳಿಸಲಾಗಿದೆ. ಅವರೆಲ್ಲರ ಕುರಿತು ನಿಗಾ ಇಡಲಾಗಿದೆ. ಇನ್ನೂ 56 ಜನರ ಮೊದಲ ಹಾಗೂ 110 ಜನರ ಎರಡನೇ ತಪಾಸಣಾ ವರದಿ ಬರಬೇಕಾಗಿದೆ ಎಂದು ವಿವರಿಸಿದ್ದಾರೆ.
ಸಿದ್ದಾಪುರ ತಾಲೂಕಿನಲ್ಲಿ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯ ಪಡಬೇಕಾಗಿಲ್ಲ. ರೋಗ ಖಚಿತವಾದವರನ್ನು ಚೆಕ್ಪೋಸ್ಟ್ನಲ್ಲಿಯೇ ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಅವರು ಕರೆತಂದ ಖಾಸಗಿ ವಾಹನದ ಚಾಲಕ ವಾಪಸ್ ಮಹಾರಾಷ್ಟ್ರಕ್ಕೆ ಹೋಗಿದ್ದಾನೆ. | ಈಶ್ವರ ಉಳ್ಳಾಗಡ್ಡಿ ಎಸಿ, ಶಿರಸಿ
ನಿಯಮ ಪಾಲಿಸದವರ ವಿರುದ್ಧ ಕ್ರಮಕ್ಕೆ ಸೂಚನೆ: ಸಿದ್ದಾಪುರ: ಪಟ್ಟಣದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಮಂಜುಳಾ ಭಜಂತ್ರಿ ಹಾಗೂ ಸಿಪಿಐ ಪ್ರಕಾಶ ಅವರಿಗೆ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರು ಸೂಚಿಸಿದರು. ತಾಲೂಕಿನ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದ ವಿವಿಧೆಡೆ ಸಂಚರಿಸಿದಾಗ ಅಂಗಡಿಕಾರರು ಹಾಗೂ ಸಾರ್ವಜನಿಕರು ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಅಂಗಡಿಕಾರರು ತಿಳಿಸಬೇಕು. ನಿಯಮ ಪಾಲಿಸದ ಅಂಗಡಿಯ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಕೆಲ ಬ್ಯಾಂಕ್ಗಳಿಗೆ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆ ಕಂಡು ಗರಂ ಆದರು. ಸ್ಯಾನಿಟೈಸರ್ ಇಡದಿರುವುದು, ಪರಸ್ಪರ ಅಂತರ ಇಲ್ಲದೆ ವ್ಯವಹಾರ ಮಾಡುತ್ತಿರುವ ಬ್ಯಾಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಚ್ಚರಿಕೆ ನೀಡಿದರು.