ಜಿಲ್ಲೆ

ಉತ್ತರ ಕನ್ನಡ ಜಿಲ್ಲೆಯಲ್ಲಿ 1 ಬಲಿ, 81 ಕೇಸ್

ಕಾರವಾರ/ಶಿರಸಿ/ ಭಟ್ಕಳ/ಕುಮಟಾ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಕರೊನಾ ಸೋಂಕಿತರ ಸಂಖ್ಯೆ ಒಮ್ಮೆಲೇ ಹೆಚ್ಚಿದೆ. ಒಂದೇ ದಿನ 81 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಒಂದು ಸಾವು ಸಂಭವಿಸಿದೆ.

ಭಟ್ಕಳದಲ್ಲಿ 45, ಕುಮಟಾದ 20, ಹೊನ್ನಾವರದ 9, ಕಾರವಾರದ 5, ಯಲ್ಲಾಪುರ ಹಾಗೂ ಶಿರಸಿಯ ತಲಾ ಒಬ್ಬರಲ್ಲಿ ರೋಗ ಇರುವುದು ಕಂಡುಬಂದಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 435ಕ್ಕೆ ತಲುಪಿದ್ದು, 269 ಜನರು ವಿವಿಧ ಕೋವಿಡ್-19 ಆಸ್ಪತ್ರೆ ಹಾಗೂ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Uttara Kannada, district, 1, killed, 81, cases, Monday,ಉತ್ತರ ಕನ್ನಡ, ಜಿಲ್ಲೆಯಲ್ಲಿ, 1 ಬಲಿ, 81 ಕೇಸ್, ಭಟ್ಕಳದಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯೆ, ಖಾಸಗಿ ಆಸ್ಪತ್ರೆಯ 66 ವರ್ಷದ ವೈದ್ಯ ಹಾಗೂ 52 ವರ್ಷದ ಸಿಬ್ಬಂದಿಯೊಬ್ಬರಿಗೆ ಕರೊನಾ ಇರುವುದು ದೃಢಪಟ್ಟಿದೆ.

ಜೂ.25ರಂದು ಭಟ್ಕಳದಲ್ಲಿ ನಡೆದ ಯುವಕನ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಇನ್ನೂ 38 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಅದರಲ್ಲಿ ಐವರು ವೃದ್ಧರು, ಒಬ್ಬ ಬಾಲಕ ಇದ್ದಾರೆ. ಒಟ್ಟಾರೆ ಮದುವೆ ಸಮಾರಂಭದಿಂದ 60ಕ್ಕೂ ಅಧಿಕ ಜನರಿಗೆ ಸೋಂಕು ಬಂದಂತಾಗಿದೆ. ಇದಲ್ಲದೆ, ಮುರ್ಡೆಶ್ವರಕ್ಕೆ ಉತ್ತರ ಪ್ರದೇಶದಿಂದ ಆಗಮಿಸಿದ ಮೂವರು ಹಾಗೂ ಶಿರಾಲಿಗೆ ಮುಂಬೈನಿಂದ ಆಗಮಿಸಿದ 56 ವರ್ಷದ ಮಹಿಳೆಗೆ ರೋಗ ಇರುವುದು ಖಚಿತವಾಗಿದೆ.

ಪೊಲೀಸ್ ಕುಟುಂಬಕ್ಕೆ: ಹೊರ ಜಿಲ್ಲೆಯಿಂದ ವಾಪಸಾದ ಸೋಂಕಿತ ತರಬೇತಿನಿರತ ಪೊಲೀಸ್ ಸಿಬ್ಬಂದಿಯ (ಪಿ-15344)ಸಂಪರ್ಕಕ್ಕೆ ಬಂದ ಅವರ ಮನೆ ಹಾಗೂ ಸುತ್ತಲಿನ 15 ಜನರಲ್ಲಿ ಸೋಂಕು ಇರುವುದು ಖಚಿತವಾಗಿದೆ. ಅದರಲ್ಲಿ ಐವರು ವೃದ್ಧರು, ನಾಲ್ಕು ವರ್ಷದ ಬಾಲಕಿ ಸೇರಿದ್ದಾರೆ. ಒಬ್ಬ ಸೋಂಕಿತ ಮಾದನಗೇರಿಯಲ್ಲಿ ಅರ್ಬನ್ ಬ್ಯಾಂಕ್​ನಲ್ಲಿ ಪಿಗ್ಮಿ ಸಂಗ್ರಹಿಸುತ್ತಿದ್ದು, ಇದರಿಂದ ಬ್ಯಾಂಕ್ ಬಂದ್ ಮಾಡಲಾಗಿದೆ. ಇನ್ನು ಅವರ ಸಂಪರ್ಕಕ್ಕೆ ಬಂದ ಹಲವರನ್ನು ಕ್ವಾರಂಟೈನ್ ಮಾಡಿ ಗಂಟಲ ದ್ರವ ಪರೀಕ್ಷೆಗೊಳಪಡಿಸಲಾಗಿದೆ.

ಅಲ್ಲದೆ, ಕುಮಟಾದಲ್ಲಿ ಹೊರ ಊರಿನಿಂದ ಬಂದಿದ್ದ ಮೂರೂರಿನ ಯುವತಿ, ಮುಂಬೈನಿಂದ ವಾಪಸಾಗಿದ್ದ ಗೋಕರ್ಣದ 29 ವರ್ಷದ ಯುವಕ, ಪನ್ವೇಲ್​ನಿಂದ ವಾಪಸಾಗಿದ್ದ ಹೊನ್ಮಾಂವನ 49 ವರ್ಷದ ಪುರುಷ, ಜ್ವರದಿಂದ ಬಳಲುತ್ತಿದ್ದ ಹಂದಿಗೋಣದ 28 ವರ್ಷದ ಯುವಕನಲ್ಲಿ ಸೋಂಕು ಖಚಿತವಾಗಿದೆ.

ಜ್ವರದ ಲಕ್ಷಣ ಇದ್ದವರಿಗೆ: ಹೊನ್ನಾವರದ ನೀಲ್ಕೋಡು, ಮೇಲಿನ ಮೂಡ್ಕಣಿ, ಮಾವಿನಕುರ್ವಾ, ಹಳದೀಪುರದ ಕರಿಮೂಲೆ, ಕುಂಬಾರಮಕ್ಕಿ, ಕಮಟೆಹಿತ್ಲು, ಮೇಲಿನ ಮೂಡ್ಕಣಿ, ವಂದೂರು ಮೇಲಿನಕೇರಿಗಳಲ್ಲಿ ಜ್ವರದ ಲಕ್ಷಣ ಇದ್ದ ಏಳು ಜನರಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಅದರಲ್ಲಿ ವೃದ್ಧ, ವೃದ್ಧೆ, ಒಬ್ಬ ಮಹಿಳೆ ಇದ್ದಾರೆ. ಯಲ್ಲಾಪುರ ಕಂಡಕ್ಟರ್ ಸಂಪರ್ಕಕ್ಕೆ ಬಂದ ಕೆಎಸ್​ಆರ್​ಟಿಸಿ ಇನ್ನೊಬ್ಬ ಸಿಬ್ಬಂದಿಗೆ ಸೋಂಕು ಖಚಿತವಾಗಿದೆ.

ಗುತ್ತಿಗೆದಾರನ ಸಂಪರ್ಕ: ಕದಂಬ ನೌಕಾನೆಲೆ ಗುತ್ತಿಗೆದಾರನಿಂದ ಸೋಂಕಿತರಾದ ಕಾರವಾರ ಕೋಡಿಬೀರ ದೇವಸ್ಥಾನ ಸಮೀಪದ ಇಲೆಕ್ಟ್ರಿಷಿಯನ್ ಮನೆಯ 54 ವರ್ಷದ ಪುರುಷ ಹಾಗೂ 22 ವರ್ಷದ ಯುವತಿಗೆ ಸೋಂಕು ಕಂಡುಬಂದಿದೆ. ಬೆಂಗಳೂರಿನಿಂದ ವಾಪಸಾದ ಪದ್ಮನಾಭನಗರದ ಪುರುಷನಿಗೆ, ಕುವೈತ್​ನಿಂದ ವಾಪಸಾದ ಮುಡಗೇರಿಯ ಯುವಕನಿಗೆ ಕೋವಿಡ್-19 ಇರುವುದು ಕಂಡುಬಂದಿದೆ.

ಸೋಂಕಿತ ವ್ಯಕ್ತಿ ಸಾವು
ಕರೊನಾ ಸೋಂಕಿನಿಂದ 42 ವರ್ಷದ ಶಿರಸಿ ಮೂಲದ ವ್ಯಕ್ತಿ ಸೋಮವಾರ ಸಾವನ್ನಪ್ಪಿದ್ದಾರೆ. ಶಿರಸಿ ಕಾನಗೋಡ ಬಾಳಗಾರಿನ (ಅಜ್ಜಿಬಳ್) ವ್ಯಕ್ತಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಜು. 4ರಂದು ಬೆಳಗ್ಗೆ 2.30ಕ್ಕೆ ಬಂದಿದ್ದ ಅವರು ಅಂದೇ ಶಿರಸಿ ಟಿಎಸ್​ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜು.5ರಂದು ಅವರ ಗಂಟಲ ದ್ರವ ಪರೀಕ್ಷೆಗೆ ಕಳಿಸಲಾಗಿದ್ದು, ಅಂದೇ ಟ್ರೂ ನಾಟ್ ಯಂತ್ರದಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಜು. 6ರಂದು ಆರ್​ಟಿಪಿಸಿಆರ್ ಯಂತ್ರದಲ್ಲಿ ಮತ್ತೊಮ್ಮೆ ಕೋವಿಡ್ ಪರೀಕ್ಷೆ ನಡೆಸಿ ಖಚಿತಪಡಿಸಲಾಗಿತ್ತು. ಅವರ ಪರಿಸ್ಥಿತಿ ಗಂಭೀರವಾಗಿದ್ದರಿಂದ ಸೋಮವಾರ 1 ಗಂಟೆಗೆ ಅವರನ್ನು ಆಂಬುಲೆನ್ಸ್ ಮೂಲಕ ಕಾರವಾರ ಕ್ರಿಮ್್ಸ ಆಸ್ಪತ್ರೆಗೆ ಕರೆತರಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಧ್ಯಾಹ್ನ 3.30ರ ಹೊತ್ತಿಗೆ ಮೃತಪಟ್ಟಿದ್ದಾರೆ. ಅವರ ಮನೆಯನ್ನು ಸೀಲ್​ಡೌನ್ ಮಾಡಲಾಗಿದೆ. ಕೋವಿಡ್-19 ನಿಯಮದಂತೆ ಮೃತರ ಅಂತ್ಯಕ್ರಿಯೆಯನ್ನು ಕಾರವಾರ ಸವೋದಯನಗರದ ರುದ್ರಭೂಮಿಯಲ್ಲಿ ನೆರವೇರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ, ಸ್ಥಳೀಯ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ. ಎಲ್ಲ ಸೋಂಕಿತರ ಮೂಲ ಪತ್ತೆಯಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಹೊರ ಊರಿನಿಂದ ಬರುತ್ತಿರುವವರಿಂದ ಸೋಂಕು ಹರಡಿದೆ. ಒಬ್ಬ ಸೋಂಕಿತನ ಸಂಪರ್ಕಕ್ಕೆ ಬಂದ ಕನಿಷ್ಠ ಹತ್ತಾರು ಜನರಿಗೆ ಕರೊನಾ ಪಾಸಿಟಿವ್ ಬರುವುದು ಸಾಮಾನ್ಯ. ಜನಸಂಖ್ಯೆ ನೋಡಿ ಆತಂಕಪಡುವ ಅಗತ್ಯವಿಲ್ಲ. ಆದರೆ, ಎಚ್ಚರ ತಪ್ಪಬಾರದು. ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಕ್ರಿಟಿಕಲಿ ವಲ್ನರೇಬಲ್ ಎಂದು ಗುರುತಿಸಿರುವ ವೃದ್ಧರು. ಗರ್ಭಿಣಿಯರು, ಮಕ್ಕಳು, ಗಂಭೀರ ಕಾಯಿಲೆ ಇರುವವರು ಯಾವುದೇ ಕಾರಣಕ್ಕೂ ಹೊರ ಬರಬಾರದು. ನಿಮ್ಮ ಎಚ್ಚರ ಇರಲಿ. | ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ

ಮಧ್ಯಾಹ್ನ 2ರ ನಂತರ ವಹಿವಾಟು ಬಂದ್
ಭಟ್ಕಳ:
ಮಧ್ಯಾಹ್ನ 2 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ ಭಟ್ಕಳ, ಪುರಸಭೆ, ಜಾಲಿ ಪಪಂ, ಹೆಬಳೆ ಗ್ರಾಪಂ ವ್ಯಾಪ್ತಿಯಲ್ಲಿ ಲಾಕ್​ಡೌನ್ ವ್ಯವಸ್ಥೆ ಜು.7ರಿಂದ ಜಾರಿಯಾಗಲಿದೆ.

ಕರೊನಾ ಪರಿಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ಈ ಆದೇಶ ಹೊರಡಿಸಿದ್ದಾರೆ. ಬೆಳಗ್ಗೆ 6 ರಿಂದ 2 ಗಂಟೆಯವರೆಗೆ ಅಂಗಡಿಗಳನ್ನು ತೆರೆದು ವ್ಯಾಪಾರ, ವಹಿವಾಟು ನಡೆಸಬಹುದು. ಜನ ಸಂಚಾರಕ್ಕೆ ಅವಕಾಶ ವಿದೆ. ನಂತರ ವೈದ್ಯಕೀಯ ಕಾರಣ ಹೊರತು ಪಡಿಸಿ ಹೊರಗೆ ಹೋದಲ್ಲಿ ಅವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಹೊರಗಿನವರಿಗೆ ನಿರ್ಬಂಧ: ಜು.10 ರಿಂದ ಮುಂದಿನ ಆದೇಶದವರೆಗೆ ಹೊರ ದೇಶ, ರಾಜ್ಯ, ಜಿಲ್ಲೆ ಹಾಗೂ ತಾಲೂಕುಗಳಿಂದ ಸಾರ್ವಜನಿಕರು ವಾಸ್ತವ್ಯದ ಉದ್ದೇಶಕ್ಕಾಗಿ ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಆದೇಶಿಸಿದ್ದಾರೆ.

ಬಂದ್ ಕರೆ: ಭಟ್ಕಳದಲ್ಲಿ ಕರೊನಾ ಸೋಂಕಿತರು ಹೆಚ್ಚುತ್ತಿದ್ದಂತೆ ಜನ, ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಲಾಕ್​ಡೌನ್ ಮಾಡಲು ಆಸಕ್ತಿ ತೋರಿದ್ದಾರೆ. ಈ ಸಂಬಂಧ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲ ಸಂಘಟನೆಗಳ ಮುಖಂಡರು ಸಭೆ ನಡೆಸಿ ಬಂದ್ ಸಂಬಂಧ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ತಿಳಿಸಿದ್ದಾರೆ.