ಜಿಲ್ಲೆ

ಉತ್ತರ ಕನ್ನಡ ಜಿಲ್ಲೆಗೆ ವರುಣಾಘಾತ

ಉತ್ತರ ಕನ್ನಡಕ್ಕೆ ಮತ್ತೆ ವರುಣಾಘಾತ ಎದುರಾಗಿದೆ. ಮಂಗಳವಾರ ರಾತ್ರಿಯಿಂದ ಸುರಿಯಿತ್ತಿರುವ ಭಾರಿ ಮಳೆಗೆ ಜಿಲ್ಲೆ ತತ್ತರಿಸಿದ್ದು, ನದಿಗಳು ಉಕ್ಕೇರಿ ಹರಿಯುತ್ತಿವೆ. ಗಾಳಿಯಿಂದ ಹಲವಾರು ಮರಗಳು ಮನೆಯ ಮೇಲೆ, ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾಗಿದೆ. ಬಹುತೇಕ ಗ್ರಾಮೀಣ ಭಾಗಗಳು ಕತ್ತಲಲ್ಲಿ ಮುಳುಗಿವೆ. ಮಳೆಯ ಸಮಗ್ರ ಚಿತ್ರಣ ಇಲ್ಲಿದೆ.

ಕಾರವಾರ: ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಉತ್ತರ ಕನ್ನಡ ತತ್ತರಿಸಿದೆ. ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೊಯಿಡಾ ತಾಲೂಕುಗಳಲ್ಲಿ ಜಡಿಮಳೆ ಬಿದ್ದಿರುವುದರಿಂದ ಕರಾವಳಿ ಭಾಗದಲ್ಲಿ ನೆರೆ ಆವರಿಸಿದೆ.

ಕಾರವಾರದಲ್ಲಿ ಅರಬ್ಬಿ ಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿರುವುದರಿಂದ ಬಂದರಿನಲ್ಲಿ ನಿಂತಿದ್ದ ಅಕ್ಷಯ ವಿದ್ಯಾ, ಜ್ಞಾನ ನಿಧಿ, ಅಂಜನಾ ದೇವಿ, ನಾಗನಾಥ ಕೃಪಾ, ವಿಜಯಲಕ್ಷ್ಮೀ, ಓಂ ಅಂಜನಾದೇವಿ ಬೋಟ್​ಗಳಿಗೆ ಹಾನಿಯಾಗಿದೆ. ಬೈತಖೋಲ್​ನ ಪ್ರತಿಭಾ ಹರಿಕಂತ್ರ ಅವರ ಮನೆ ಕುಸಿದಿದೆ. ತಾಲೂಕಿನಲ್ಲಿ 8 ವಿದ್ಯುತ್ ಕಂಬಗಳು ಮುರಿದಿದ್ದು, 1 ಲಕ್ಷಕ್ಕೂ ಅಧಿಕ ಹಾನಿಯಾಗಿದೆ.

ಜೊಯಿಡಾದಿಂದ ಗಣೇಶಗುಡಿಯವರೆಗೆ 10 ವಿದ್ಯುತ್ ಕಂಬಗಳ ಮೇಲೆ ಮರ ಮುರಿದು ಬಿದ್ದು, ವಿದ್ಯುತ್ ಸ್ಥಗಿತವಾಗಿದೆ.

ಮಳೆಯ ಪ್ರಮಾಣ: ಬುಧವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 104.4 ಮಿಮೀ, ಭಟ್ಕಳದಲ್ಲಿ 44.4, ಹಳಿಯಾಳದಲ್ಲಿ 58.4, ಹೊನ್ನಾವರದಲ್ಲಿ 86.8, ಕಾರವಾರದಲ್ಲಿ 100, ಕುಮಟಾದಲ್ಲಿ 77.6, ಮುಂಡಗೋಡಿನಲ್ಲಿ 50.6, ಸಿದ್ದಾಪುರದಲ್ಲಿ 143.2, ಶಿರಸಿಯಲ್ಲಿ 128, ಜೊಯಿಡಾದಲ್ಲಿ 98.2, ಯಲ್ಲಾಪುರದಲ್ಲಿ 103 ಮಿಮೀ ಮಳೆಯಾಗಿದೆ.

ಆ.10 ರವರೆಗೂ ರೆಡ್ ಅಲರ್ಟ್: ಆಗಸ್ಟ್ 10 ರವರೆಗೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಹೇಳಿದೆ. ಆ.6 ಹಾಗೂ 7 ರಂದು ಮಳೆ ಸ್ವಲ್ಪ ಕಡಿಮೆಯಾಗಲಿದೆ. ನಂತರ ಮತ್ತೆ ಹೆಚ್ಚಾಗಲಿದೆ ಎಂದು ಎಚ್ಚರಿಸಲಾಗಿದ್ದು, ರೆಡ್ ಅಲರ್ಟ್ ಘೊಷಿಸಲಾಗಿದೆ.

ಶಾಸಕಿ ಭೇಟಿ: ಅಂಕೋಲಾ ತಾಲೂಕಿನ ಗಂಗಾವಳಿ ನದಿ ಉಕ್ಕಿದ್ದರಿಂದ ಹಲವು ಗ್ರಾಮಗಳಿಗೆ ಸಮಸ್ಯೆಯಾಗಿದೆ. ಸಹಡಗೇರಿ, ಅಗ್ರಗೋಣ ಗ್ರಾಪಂ ವ್ಯಾಪ್ತಿಯ ಜೂಗಾದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಶಾಸಕಿ ರೂಪಾಲಿ ನಾಯ್ಕ ಈ ಎರಡೂ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಧೈರ್ಯ ತುಂಬಿದರು. ಕರೊನಾ ಸಮಸ್ಯೆ ಕೂಡ ಇರುವುದರಿಂದ ಮಕ್ಕಳು ಮತ್ತು ಹಿರಿಯರು ಹೆಚ್ಚು ಕಾಳಜಿ ವಹಿಸಿಕೊಳ್ಳಬೇಕು ಎಂದು ಸೂಚಿಸಿದರು.

ಹೆಗಡೆ, ದೀವಗಿಯಲ್ಲಿ ಜಲಾವೃತ: ಅಘನಾಶಿನಿ ಹಾಗೂ ಚಂಡಿಕಾ ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ತಾಲೂಕಿನಲ್ಲಿ ನೂರಾರು ಮನೆಗಳು ಜಲಾವೃತವಾಗಿವೆ. ಕತಗಾಲ ಬಳಿ ಚಂಡಿಕಾ ಹೊಳೆಯ ನೀರು ರಸ್ತೆಗೆ ಹತ್ತಿದ್ದು, ಶಿರಸಿ-ಕುಮಟಾ ನಡುವಿನ ವಾಹನ ಸಂಚಾರ ಬುಧವಾರ ಸಾಯಂಕಾಲದ ಹೊತ್ತಿಗೆ ಸಂಪೂರ್ಣ ಸ್ಥಗಿತವಾಗಿದೆ. ಜಿಪಂ ಸದಸ್ಯ ಗಜು ಪೈ ಸ್ಥಳಕ್ಕೆ ತೆರಳಿ ಸ್ಥಳೀಯರ ಸಮಸ್ಯೆ ಆಲಿಸಿದರು.

ದೀವಗಿಯ ಕೆಳಗಿನ ಕೇರಿ, ಅಂಬಿಗರ ಕೇರಿ, ಹೆಗಡೆ ಗ್ರಾಮದ ತಾರಿ ಬಾಗಿಲು, ಮಿರ್ಜಾನದ ಕಲ್ಮಟ್ಟಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸರ್ಕಾರಿ ಶಾಲೆಗಳಲ್ಲಿ ಕಾಳಿ ಕೇಂದ್ರ ತೆರೆಯುವ ವ್ಯವಸ್ಥೆ ಮಾಡಲಾಗಿದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಚಿಂತನೆ ನಡೆದಿದೆ. ಶಾಸಕ ದಿನಕರ ಶೆಟ್ಟಿ ಮಂಗಳವಾರ ರಾತ್ರಿಯೇ ನೆರೆ ಪೂರ್ವ ತಯಾರಿಯ ಕುರಿತು ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದರು. ಬುಧವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಅಣೆಕಟ್ಟೆಯಿಂದ ನೀರು ಹೊರಕ್ಕೆ: ಕದ್ರಾ ಅಣೆಕಟ್ಟೆಟ್ಟೆಗೆ 64887 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 6 ಗೇಟ್​ಗಳನ್ನು ತೆರೆದು 40 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ವಿದ್ಯುತ್ ಉತ್ಪಾದನೆ ಮಾಡಿ 18 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಒಟ್ಟಾರೆ 58,707 ಕ್ಯೂಸೆಕ್ ನೀರು ಕಾಳಿ ನದಿಗೆ ಹರಿಯುತ್ತಿದೆ. 34.50ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯದ ಅಣೆಕಟ್ಟೆಯಲ್ಲಿ 32.50 ಮೀಟರ್ ನೀರು ತುಂಬಿದೆ.

ಕಾಳಿ ಇಕ್ಕೆಲದ ಪ್ರದೇಶಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಕದ್ರಾ ಮಹಾಮಾಯಾ ದೇವಸ್ಥಾನದ ಜಾತ್ರೆ ಕಟ್ಟೆ ಈಗಾಗಲೇ ತುಂಬಿಕೊಂಡಿದೆ. ಸೂಪಾ ಜಲಾಶಯಕ್ಕೆ 38,940 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಕೊಚ್ಚಿ ಹೋದ ಯುವಕ: ಗುಳ್ಳಾಪುರ ಶೇವ್ಕಾರ್ ಸಮೀಪ ಬೈಕ್​ನ ಮೇಲೆ ಸೇತುವೆ ದಾಟುವ ಸಮಯದಲ್ಲಿ ಯುವಕನೊಬ್ಬ ಕೊಚ್ಚಿ ಹೋದ ಘಟನೆ ಬುಧವಾರ ಸಾಯಂಕಾಲ ನಡೆದಿದೆ. ಹೊನ್ನಾವರ ಕಡ್ನೀರು ಕಾರಗದ್ದೆಯ ಸಂತೋಷ ಮೋಹನ ನಾಯ್ಕ(30)ಮೃತರು. ಅವರ ಮಾವ ಜತೆಗಿದ್ದು ಅವರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.