ಕಾರವಾರ: ಕರೊನಾ ಭೀತಿಗೆ ಉತ್ತರ ಕನ್ನಡ ಭಾನುವಾರ ಸ್ತಬ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲಿ ವ್ಯಾಪಕ ಸ್ಪಂದನೆ ಸಿಕ್ಕಿದೆ.
ಇಡೀ ದಿನ ಜಿಲ್ಲೆಯ ಜನರು ಮನೆಯಲ್ಲೇ ಕಾಲ ಕಳೆದರು. ಅಂಗಡಿಗಳು, ಹೋಟೆಲ್, ಸರ್ಕಾರಿ ಕಚೇರಿಗಳು ರಸ್ತೆಗಳಲ್ಲಿ ಆಟೋ ರಿಕ್ಷಾ, ಟ್ಯಾಕ್ಸ್, ಮ್ಯಾಕ್ಸಿ ಕ್ಯಾಬ್ ಸೇರಿ ಎಲ್ಲ ರೀತಿಯ ವಾಹನಗಳ ಸಂಚಾರ ಬಂದಾಗಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಬೈಕ್, ಕಾರ್ ಮುಂತಾದ ಖಾಸಗಿ ವಾಹನಗಳು ಕಂಡು ಬಂದವು. ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಆದರೆ, ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ಜನರ ಓಡಾಟ ಕಂಡುಬಂತು. ಆಸ್ಪತ್ರೆಗಳು ಎಂದಿನಂತೆ ತೆರೆದಿದ್ದವು, ಆರೋಗ್ಯ ಇಲಾಖೆ ಸಿಬ್ಬಂದಿ ಪೊಲೀಸ್ ಸಿಬ್ಬಂದಿ, ಪತ್ರಕರ್ತರು ಮಾತ್ರ ರಸ್ತೆಗಳಲ್ಲಿ ಓಡಾಡುವುದು ಕಂಡುಬಂತು.
ಸಾಯಂಕಾಲ 5 ಗಂಟೆಯಾಗುತ್ತಿದ್ದಂತೆ ಜಿಲ್ಲೆಯೆಲ್ಲೆಡೆ ಜನ ಹೊರಗೆ ಬಂದು ಜನ ಚಪ್ಪಾಳೆ ತಟ್ಟಿದರು. ಜಾಗಟೆ, ಶಂಖ ಊದಿ ಅಗತ್ಯ ಸೇವೆ ನೀಡಿದ ಆರೋಗ್ಯ, ಪೊಲೀಸ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ನಿಷೇಧಾಜ್ಞೆ ಜಾರಿ: ಕರೊನಾ ಹರಡುವಿಗೆ ತಡೆಗಟ್ಟುವ ನಿಟ್ಟಿನಲ್ಲಿ ಮಾ. 24 ರಿಂದ 30 ರವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಭಾನುವಾರ ಆದೇಶ ಹೊರಡಿಸಿದ್ದಾರೆ. ಸೆಕ್ಷನ್ 144 ನಂತೆ 5 ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ಅಧಿಕೃತ ಸಭೆ, ಸಮಾರಂಭ, ಧಾರ್ವಿುಕ ಕಾರ್ಯಕ್ರಮಗಳಿಗೂ ಇದು ಅನ್ವಯಿಸಲಿದೆ.
ಗೋವಾ, ಧಾರವಾಡ ಗಡಿ ಬಂದ್: ಗೋವಾ ರಾಜ್ಯದ ಗಡಿಯಿಂದ ವಾಹನ ಹಾಗೂ ಜನ ಸಂಚಾರವನ್ನು ಬಂದ್ ಮಾಡಲಾಗಿದೆ. ಗೋವಾ ರಾಜ್ಯ ಈಗಾಗಲೇ ಹೊರ ರಾಜ್ಯಗಳ ವಾಹನಗಳನ್ನು ಸಂಪೂರ್ಣ ನಿಷೇಧಿಸಿದೆ. ಭಾನುವಾರದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಾಜಾಳಿ, ರಾಷ್ಟ್ರೀಯ ಹೆದ್ದಾರಿ 04 ರಲ್ಲಿ ಅನಮೋಡ ತನಿಖಾ ಠಾಣೆಗಳನ್ನು ಬಿಗಿಗೊಳಿಸಲಾಗಿದ್ದು ಯಾವುದೇ ವಾಹನಗಳನ್ನು ಬಿಡಲಾಗುತ್ತಿಲ್ಲ. ಇನ್ನು ಧಾರವಾಡ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಆ ಜಿಲ್ಲೆಯಿಂದಲೂ ಜನ ಸಂಚಾರ ನಿರ್ಬಂಧಿಸಲಾಗಿದೆ. ಮುಂಡಗೋಡ, ಯಲ್ಲಾಪುರ, ಹಳಿಯಾಳ ತಾಲೂಕುಗಳಿಗೆ ಜೀವನೋಪಾಯಕ್ಕೆ ಆಹಾರ ಹಾಗೂ ಇತರ ಸಾಮಗ್ರಿಗಳನ್ನು ಹೊರತುಪಡಿಸಿ ಧಾರವಾಡ ಜಿಲ್ಲೆಯಿಂದ ಎಲ್ಲ ರೀತಿಯ ಆಗಮನ ಹಾಗೂ ನಿರ್ಗಮನವನ್ನು ನಿಷೇಧಿಸಲಾಗಿದೆ. 1 ತಿಂಗಳು ಅಥವಾ ಅದಕ್ಕಿಂತ ಮೇಲ್ಪಟ್ಟ ಅವಧಿಯಿಂದ ಧಾರವಾಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ನಿವಾಸಿಗಳ ಆಗಮನ, ಅತ್ಯಂತ ತುರ್ತು ಕೆಲಸಗಳಿಗೆ ಹೊರತುಪಡಿಸಿ ಧಾರವಾಡ ಜಿಲ್ಲೆಗೆ ಉತ್ತರ ಕನ್ನಡದವರ ಆಗಮನ ಹಾಗೂ ನಿರ್ಗಮನವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಆದೇಶಿಸಿದ್ದಾರೆ.
ಕೊಂಕಣ ರೈಲ್ವೆಯಲ್ಲಿ ಬಂದ ಜನ: ಕೊಂಕಣ ರೈಲ್ವೆ ಸ್ಥಳೀಯವಾಗಿ ಓಡಾಡುವ ರೈಲುಗಳನ್ನು ಮಾತ್ರ ಭಾನುವಾರ ಬಂದ್ ಮಾಡಿತ್ತು. ಇದರಿಂದ ಭಾನುವಾರ ಬೆಂಗಳೂರು- ವಾಸ್ಕೋ ರೈಲಿನಲ್ಲಿ ನೂರಾರು ಜನ ಕಾರವಾರಕ್ಕೆ ಬಂದಿಳಿದರು. ಅವರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಬಿಡಲಾಯಿತು.
ಜಾರ್ಖಂಡದಿಂದ ಬಂದು ಸಿಕ್ಕಿ ಬಿದ್ದರು: ಹುಬ್ಬಳ್ಳಿಯಿಂದ ಆಗಮಿಸಿದ ಜಾರ್ಖಂಡ ಮೂಲದ ಆರು ಜನ ಕಾರವಾರದಲ್ಲಿ ಸಿಕ್ಕಿಹಾಕಿಕೊಂಡು ಪರಿತಪಿಸಿದರು. ಜನತಾ ಕರ್ಫ್ಯೂ ಇದ್ದಿದ್ದು ತಮಗೆ ಗೊತ್ತಿಲ್ಲ ಎನ್ನುತ್ತಿದ್ದ ಅವರು ಗೋವಾ ಕಡೆಗೆ ನಡೆದುಕೊಂಡು ಹೊರಟಿದ್ದರು. ಪೊಲೀಸರು ಅವರನ್ನು ತಡೆದು ವಾಪಸ್ ಕಳಿಸಿದ್ದರಿಂದ ಕಾಳಿ ಸೇತುವೆ ಬಳಿ ಬಸ್ ನಿಲ್ದಾಣದಲ್ಲಿ ಕಾದು ಕುಳಿತರು. ಗೋವಾದಿಂದ-ಗೋಕರ್ಣಕ್ಕೆ ಆಗಮಿಸುವ ಕೆಲ ವಿದೇಶಿಗರು ಮಾಜಾಳಿಯ ತನಿಖಾ ಠಾಣೆಯಲ್ಲಿ ಕಾದು ನಿಂತಿದ್ದು ಕಂಡು ಬಂತು.</