ಜಿಲ್ಲೆ

ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ನಿರ್ಣಯ-ಸುಧಾಕರ ಟ್ವೀಟ್

ವಿಜಯವಾಣಿ ಸುದ್ದಿಜಾಲ ಕಾರವಾರ
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ನಡೆದ ಆನ್‌ಲೈನ್ ಅಭಿಯಾನದಿಂದ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಎಚ್ಚೆತ್ತಿದ್ದಾರೆ. ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಅವರು, ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಕುರಿತು ಶೀಘ್ರ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಜಿಲ್ಲೆಯ ನೆಟ್ಟಿಗರು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಭಾನುವಾರ ಸಾಯಂಕಾಲ 5 ರಿಂದ ಟ್ವಿಟ್ಟರ್ ಅಭಿಯಾನ ನಡೆಸಿದ್ದರು. ದೇಶದ ಟಾಪ್ 35 ಹ್ಯಾಶ್‌ಟ್ಯಾಗ್‌ನಡಿ `ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್' `ನೋ ಹಾಸ್ಪಿಟಲ್ ನೋ ವೋಟ್' ಅಭಿಯಾನ ಟ್ರೆಂಡ್ ಆಗಿದೆ. ಭಾನುವಾರ ರಾತ್ರಿ 8 ಗಂಟೆಯವರೆಗೆ 14 ಸಾವಿರ ಜನ ಟ್ವೀಟ್ ಮಾಡಿದ್ದರು. ಆಸ್ಪತ್ರೆಯ ಅವಶ್ಯಕತೆಯ ಕುರಿತು ಬರೆದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ, ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವರಿಗೆ ಟ್ಯಾಗ್ ಮಾಡಿದ್ದರು. ಈ ಹೋರಾಟಕ್ಕೆ ರಾಜ್ಯ ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದರು.
ಈ ಹೋರಾಟದ ಮುನ್ಸೂಚನೆ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದರು. ಜಿಲ್ಲೆಯ ಅವಶ್ಯಕತೆಯ ಕುರಿತು ರಾಜ್ಯ ಆರೋಗ್ಯ ಸಚಿವ ಸುಧಾಕರ ಹಾಗೂ ಸಿಎಂ ಅವರ ಜತೆ ಮಾತನಾಡಲಾಗಿದೆ ಎಂದಿದ್ದರು. ಶಾಸಕಿ ರೂಪಾಲಿ ನಾಯ್ಕ ಸಹ ಪತ್ರಿಕಾ ಹೇಳಿಕೆ ನೀಡಿ ಆಗಸ್ಟ್ 1 ಅಥವಾ 2 ರಂದು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯ ಕುರಿತು ಸಿಎಂ ಘೋಷಿಸಲಿದ್ದಾರೆ ಎಂದಿದ್ದರು.
ಎಲ್ಲ ಬೆಳವಣಿಗೆಗಳ ನಂತರ ಆರೋಗ್ಯ ಸಚಿವ ಕೆ.ಸುಧಾಕರ್ ಸ್ವತಃ ಹೇಳಿಕೆ ನೀಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ಅವಶ್ಯಕತೆ ಇದೆ ಎಂಬ ಸಾರ್ವಜನಿಕರ ಬೇಡಿಕೆಯನ್ನು ಜಾಲತಾಣದಲ್ಲಿ ಗಮನಿಸಿದ್ದೇನೆ. ಕಾರವಾರ ವೈದ್ಯಕೀಯ ಕಾಲೇಜ್‌ನಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ ಹಾಗೂ ಜಿಲ್ಲೆಗೆ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳುವ ಭರವಸೆ ನೀಡುತ್ತಿದ್ದೇನೆ. ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಮೂಲ ಸೌಕರ್ಯದ ಅಗತ್ಯತೆಗಳ  ಕುರಿತಂತೆ ಜಿಲ್ಲೆಯ ಎಲ್ಲ ಜನಪ್ರತಿನಿಽಗಳೊಂದಿಗೆ ಶೀಘ್ರವೇ ಸಭೆ ನಡೆಸಿ ಆದಷ್ಟು ಬೇಗ ಕ್ರಿಯಾ ಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು.' ಎಂದು ತಿಳಿಸಿದ್ದಾರೆ.
...............

ಆಗಸ್ಟ್ 15 ರೊಳಗೆ ಘೋಷಣೆ ಮಾಡಲಿ
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ಕ್ರಿಟಿಕಲ್ ಕೇರ್ ಸೆಂಟರ್‌ನ್ನು ಆಗಸ್ಟ್ 15 ರೊಳಗೆ ಸರ್ಕಾರ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ಆ.16 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷಾತೀತ ಜನಪರ ವೇದಿಕೆಯ ಅಧ್ಯಕ್ಷ ಡಾ.ಗಜೇಂದ್ರ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಜನ ಕಾಳಿ ಜಲವಿದ್ಯುತ್ ಯೋಜನೆ  ಕೈಗಾ ಅಣು ವಿದ್ಯುತ್ ಘಟಕ, ಸೀಬರ್ಡ್ ನೌಕಾ ಯೋಜನೆ , ಕೊಂಕಣ ರೈಲ್ವೆ, ಈಗ ವಿಮಾನ ನಿಲ್ದಾಣ ಮುಂತಾದ ಯೋಜನೆಗಳಿಗೆ ತಮ್ಮ ಜಮೀನು ಬಿಟ್ಟು ನಿರಾಶ್ರಿತರಾಗಿದ್ದಾರೆ. ಅಭಿವೃದ್ಧಿಗೆ ಇಂಥ ಯೋಜನೆಗಳು ಬೇಕು. ಆದರೆ, ಅದರ ಜತೆಗೆ ನಿರಾಶ್ರಿತರಾಗುವವರ ಕಾಳಜಿಯೂ ಸರ್ಕಾರದ್ದೇ ಆಗಿದೆ. ಇಲ್ಲಿನ ಜನರ ಬಹು ದಿನದ ಬೇಡಿಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನೀಡಬೇಕು ಎಂದು ಒತ್ತಾಯಿಸಿದರು. ದಿನಕರ ವಾಮನ ನಾಗೇಕರ್, ಚಂದ್ರಕಾಂತ ನಾಯ್ಕ, ಶಂಕರ ಗುನಗಿ, ವೆಂಕಟೇಶ ವೆರ್ಣೇಕರ್ ಸುದ್ದಿಗೋಷ್ಠಿಯಲ್ಲಿದ್ದರು.