ಹುಣಸೂರು: ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ಐಇಸಿ(ಮಾಹಿತಿ, ಶಿಕ್ಷಣ ಮತ್ತು ಸಂವಹನ) ಚಟುವಟಿಕೆ ಕೈಗೊಳ್ಳಲು ನಗರಸಭೆ ವ್ಯಾಪ್ತಿಯಲ್ಲಿ 8 ಜನರಿಗೆ ಸಮುದಾಯ ಸಂಚಾಲಕರಿಗೆ ನೇಮಕಾತಿ ಪತ್ರವನ್ನು ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ವಿತರಿಸಿದರು.
ನಗರಸಭೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಸ್ವಚ್ಛ ಭಾರತ ಯೋಜನೆಯಡಿ ಹುಣಸೂರು ನಗರಸಭೆ 2 ಬಾರಿ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಹೊಂದಿದೆ. ಇದೀಗ ಸ್ವಚ್ಛ ಭಾರತ ಮಿಷನ್ 2.0 ಯೋಜನೆಯಡಿ ನಾಗರಿಕರಲ್ಲಿ ಸ್ವಚ್ಛತೆಯ ಕುರಿತಾಗಿ ಅರಿವು ಮತ್ತು ಶಿಕ್ಷಣವನ್ನು ನೀಡಲು ನಗರಸಭೆಯಿಂದ ನೋಂದಣಿಯಾದ ಸ್ತ್ರೀಶಕ್ತಿ ಸಂಘದ ಸದಸ್ಯರನ್ನು ಜಿಲ್ಲಾ ಯೋಜನಾ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ. ಈ ಎಲ್ಲ ಸಮುದಾಯ ಸಂಚಾಲಕಿಯರು ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ನಗರದ ಸ್ವಚ್ಛತೆಗೆ ಭದ್ರ ಬುನಾದಿ ಹಾಕುವಂತೆ ಸಲಹೆ ನೀಡಿದರು.
ಪೌರಾಯುಕ್ತೆ ಕೆ.ಮಾನಸಾ ಮಾತನಾಡಿ, ಪ್ರತಿ 6 ಸಾವಿರ ನಾಗರಿಕರಿಗೆ ಒಬ್ಬರಂತೆ ಒಟ್ಟು 8 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದು, 18 ಸಾವಿರ ರೂ.ವೇತನ ಸಿಗಲಿದೆ. ಸಮುದಾಯ ಸಂಚಾಲಕಿಯರು ಮನೆ ಮನೆಗೆ ತೆರಳಿ ಹಸಿ ಕಸ, ಒಣ ಕಸ ಪ್ರತ್ಯೇಕಗೊಳಿಸುವ, ಕಸ ವಿಲೇವಾರಿಗೆ ಬರುವ ವಾಹನಗಳಿಗೆ ಕಡ್ಡಾಯವಾಗಿ ನೀಡುವ, ವಾಣಿಜ್ಯ ರಸ್ತೆಗಳಲ್ಲಿ ಅಂಗಡಿ, ಮುಂಗಟ್ಟು ಮಾಲೀಕರಿಗೆ ಕಸ ವಿಲೇವಾರಿ ಕುರಿತು ಮಾಹಿತಿ ನೀಡುವ, ಸ್ವಚ್ಛ ಭಾರತ ಸರ್ವೇಕ್ಷಣ ವೇಳೆ ನಗರಸಭೆ ಅಧಿಕಾರಿಗಳೊಂದಿಗೆ ಮಾಹಿತಿ ನೀಡಿ ಕರ್ತವ್ಯ ನಿರ್ವಹಿಸುವ ಮುಂತಾದ ಜವಾಬ್ದಾರಿಯನ್ನು ಹೊಂದಿದ್ದು, ಮುಖ್ಯವಾಗಿ ನಾಗರಿಕರಲ್ಲಿ ಸ್ಚಚ್ಛತೆ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸಲಿದ್ದಾರೆ ಎಂದರು.
ಪರಿಸರ ಇಂಜಿನಿಯರ್ ಸೌಮ್ಯಾ, ಹಿರಿಯ ಆರೋಗ್ಯ ನಿರೀಕ್ಷಕ ಶಶಿಕುಮಾರ್ ಇತರರು ಹಾಜರಿದ್ದರು.
ನೇಮಕಗೊಂಡವರು: ಹೊಸೂರಮ್ಮ ಬಡಾವಣೆಯ ದೇವಕಿ, ಲಾಲ್ ಬಂದ್ ಬೀದಿಯ ಆರ್.ಲತಾ, ಜೆ.ಶಿಲ್ಪಾ, ಸದಾಶಿವನಕೊಪ್ಪಲು ಬಡಾವಣೆಯ ಟಿ.ಎಂ.ಸುಷ್ಮಾ, ಬಿ.ಸುನೀತಾ, ಗಣೇಶನ ಗುಡಿ ಬೀದಿಯ ಕೆ.ಆರ್.ಲಾವಣ್ಯ, ಮಂಜುನಾಥ ಬಡಾವಣೆಯ ಬಿ.ತೇಜಸ್ವಿನಿ ಮತ್ತು ಅಗ್ರಹಾರ ಗ್ರಾಮದ ಎ.ಆರ್.ಅಶ್ವಿನಿ ನೇಮಕಗೊಂಡಿದ್ದಾರೆ.