ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಭವ್ಯ ಭಾರತದ ಆಧಾರ ಸ್ತಂಭ. ದೇಶದ ಉಜ್ವಲ ಭವಿಷ್ಯ ನಿಮ್ಮನ್ನೇ ಅವಲಂಬಿಸಿರುವುದರಿಂದ ಕೀಳು ಅಭಿಮತ ತ್ಯಜಿಸಿ, ಒಳ್ಳೆ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ವಡ್ಡೀನ ಅಭಿಪ್ರಾಯಪಟ್ಟರು.
ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಶಾಲಾ ಸಂಸತ್ ಪ್ರತಿನಿಧಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲಾ ಎಲ್ಲ ಚಟುವಟಿಕೆಗಳು ಸಹ ಪಠ್ಯ ಚಟುವಟಿಕೆಗಳ ಅವಿಭಾಜ್ಯ ಅಂಗ. ಈ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಗರಿಕತ್ವದ ತರಬೇತಿ ಹಾಗೂ ನಾಯಕತ್ವದ ಗುಣ ಬೆಳೆಸಲು ಪ್ರಮುಖ ಪಾತ್ರ ವಹಿಸುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಪಾತ್ರ ತಿಳಿಸುತ್ತದೆ. ಕಲಿಕೆಯಲ್ಲಿ ಬೇಸರ, ಬಡತನ ನೀಗಿಸಿ ಕಲಿಕೆ ಹರ್ಷದಾಯಕವಾಗುವಂತೆ ಮಾಡುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಗೌರವ ಕಾರ್ಯದರ್ಶಿ ಸಿ.ಬಿ. ಮಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಾಸವಾಗುವುದೇ ಶಾಲೆಗಳಲ್ಲಿ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸತ್ವ ಶಾಲಿಯಾಗಲು ಶಾಲಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯೆ ಪಡೆಯುವಾಗ ಒಳ್ಳೆ ಜೀವನ ಮೌಲ್ಯಗಳನ್ನು ಕಲಿಯಬೇಕು ಎಂದರು.
ಎಸ್.ಸಿ.ನೀಲಗುಂದ, ಮಂಜುಳಾ ಹನಸಿ, ಶಶಿಕಲಾ ಹಿರೇಮಠ, ಸುನೀತಾ ಚಿನ್ನದಕೈ, ಪ್ರತಿಭಾ ಪಾಟೀಲ, ಪ್ರವೀಣ ಜಗದಾಲೆ, ವಿದ್ಯಾರ್ಥಿಗಳು, ಇತರರು ಇದ್ದರು.
ಪ್ರೌಢ ಶಾಲೆ ಮುಖ್ಯಾಧ್ಯಾಪಕಿ ಭುವನೇಶ್ವರಿ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸತ್ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್.ವಿ.ಪಾಟೀಲ ನಿರೂಪಿಸಿದರು. ಎಂ.ಎಸ್.ಭಾವಿಹಾಳ ವಂದಿಸಿದರು.