ಜಿಲ್ಲೆ

ಉತ್ತಮ ಸೇವೆ, ಸ್ವಚ್ಛತೆಗೆ ಆದ್ಯತೆ ನೀಡಿ

ಹನೂರು: ಮಹದೇಶ್ವಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಉತ್ತಮ ಸೇವೆಯನ್ನು ನೀಡುವ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು, ಶ್ರೀ ಕ್ಷೇತ್ರದ ಪಾವಿತ್ರೃತೆಯನ್ನು ಕಾಪಾಡಬೇಕು ಎಂದು ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ತಿಳಿಸಿದರು.

ಮ.ಬೆಟ್ಟದಲ್ಲಿ ನಡೆಯುವ ದೀಪಾವಳಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಸ್ವಚ್ಛತಾ ಸಂಬಂಧ ಅಂತರಗಂಗೆ, ಬಸ್ ನಿಲ್ದಾಣ, ಕುಟೀರ ಸಮುಚ್ಛಯ, ದೇಗುಲದ ಆವರಣ, ಶೌಚಗೃಹಗಳ ಹಾಗೂ ಇನ್ನಿತರ ಕಡೆಗಳಿಗೆ ತೆರಳಿ ಪರಿಶೀಲಿಸಿ ಮಾತನಾಡಿದರು.

ಮ.ಬೆಟ್ಟದಲ್ಲಿ ಅ.29ರಿಂದ 5 ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿದ್ದು, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಭಕ್ತರಿಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಜತೆಗೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಆಗಮಿಸುವ ಭಕ್ತರಿಗೆ ಶ್ರೀ ಕ್ಷೇತ್ರ ಇಷ್ಟವಾಗುವಂತಿರಬೇಕು. ಅಂತರಂಗಂಗೆಯಲ್ಲಿ ಬಹುತೇಕ ಭಕ್ತರು ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಕೆಲ ಭಕ್ತರು ಬಟ್ಟೆ, ಗಂಧದಕಡ್ಡಿ ಕವರ್ ಹಾಗೂ ಇನ್ನಿತರ ವಸ್ತುಗಳನ್ನು ಬಿಸಾಡುತ್ತಾರೆ. ಇದು ಅಶುಚಿತ್ವಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸ್ವಚ್ಛತೆ ಕಾಪಾಡುವಂತೆ ಭಕ್ತರಿಗೆ ಅರಿವು ಮೂಡಿಸಬೇಕು. ಜಾತ್ರೆಯಲ್ಲಿ ಹೆಚ್ಚು ಜನಸಂದಣಿ ಜಮಾಯಿಸುವುದರಿಂದ ಆಗಾಗ್ಗೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವುದರ ಮೂಲಕ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ವಹಿಸಿರುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಜಾತ್ರೆಯ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಶೌಚಗೃಹಗಳಿಗೆ ತೆರಳಿದ ವೇಳೆ ಆಗಾಗ್ಗೆ ಶುಚಿಗೊಳಿಸುವುದರ ಮೂಲಕ ಸ್ವಚ್ಛತೆ ಕಾಪಡಿಕೊಳ್ಳಬೇಕು. ಸಮರ್ಪಕ ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಭಕ್ತರ ಜತೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ದೂರು ಬರಬಾರದು ಎಂದರು.

ಬಳಿಕ ದೇಗುಲಕ್ಕೆ ತೆರಳಿದ ಕಾರ್ಯದರ್ಶಿ ಅವರು ಜಾತ್ರಾ ವೇಳೆ ದೇಗುಲದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳ ಮಾಹಿತಿ ಪಡೆದರು. ಈ ವೇಳೆ ಸಂಪ್ರದಾಯಿಕ ಪೂಜಾ ಪುನಸ್ಕಾರಗಳು ಸುಸೂತ್ರವಾಗಿ ನೆರವೇರಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಹಾಲರವೆ ಉತ್ಸವಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಯಾವುದೇ ರೀತಿಯಲ್ಲೂ ಸಮಸ್ಯೆ ಆಗಬಾರದು ಎಂದು ತಿಳಿಸಿದರು.

ಇದೇ ವೇಳೆ ಹಾಲರವೆ ಉತ್ಸವಕ್ಕೆ ತಮಿಳುನಾಡು ಮೂಲದ ದಾನಿಯೊಬ್ಬರೂ 101 ಹೆಣ್ಣು ಮಕ್ಕಳಿಗೆ ನೀಡಿರುವ ಸೀರೆಯನ್ನು ಪರಿಶೀಲಿಸಿದರು.

ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರುಶೇಖರ್, ದೇಗುಲದ ಪ್ರಧಾನ ಆಗಮಿಕ ಕರವೀರಸ್ವಾಮಿ, ಪಾರುಪತ್ತೆಗಾರ ಮಹದೇವಸ್ವಾಮಿ, ನೌಕರರಾದ ರವೀಂದ್ರ, ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.