ಕೂಡಿಗೆಯ ಸೈನಿಕ ಶಾಲೆಯ 16ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. 
ಜಿಲ್ಲೆ

ಉತ್ತಮ ಸಾಧಕರಂತೆ ಉನ್ನತ ಸಾಧನೆ ಮಾಡಿ

ಕುಶಾಲನಗರ: ವಿದ್ಯಾರ್ಥಿಗಳು ಕೈಗೊಂಡ ಯಾವುದೇ ಕಠಿಣ ನಿರ್ಧಾರಗಳನ್ನು ಸ್ಥಗಿತಗೊಳಿಸದೆ ಅವಿರತ ಪ್ರಯತ್ನದಿಂದ ಮತ್ತು ಹೋರಾಟಗಳಿಂದ ಮುಂದುವರಿಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಸಲಹೆ ನೀಡಿದರು.


ಕೂಡಿಗೆಯ ಸೈನಿಕ ಶಾಲೆಯ 16ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ದೈಹಿಕವಾಗಿ ಸದೃಢವಾಗಿರುವ ಮೂಲಕ ತಾವು ನಿರ್ವಹಿಸುವ ಕಾರ್ಯಗಳನ್ನು ಆನಂದದಿಂದ ಪೂರ್ಣಗೊಳಿಸಬೇಕು. ಬೇರಾವುದೇ ಸಾಮಾನ್ಯ ಶಾಲೆಯಲ್ಲಿ ಲಭ್ಯವಿರದ ಸೌಲಭ್ಯಗಳು ಇಲ್ಲಿ ಸಿಗುತ್ತದೆ. ಆ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.


ಪರಮವೀರ ಚಕ್ರ ಪ್ರಶಸ್ತಿ ವಿಜೇತ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರಿಂದ ಪ್ರೇರೇಪಣೆಗೊಂಡ ತಮ್ಮ ವೈಯಕ್ತಿಕ ಬದುಕಿನ ಹಲವು ಕ್ಷಣಗಳನ್ನು ಸ್ಮರಿಸಿಕೊಂಡು, ಬದುಕಿನ ಗುರಿ ತಲುಪಲು ಉತ್ತಮ ಸಾಧಕರನ್ನು ಇಟ್ಟುಕೊಂಡು ಉನ್ನತ ಸಾಧನೆ ಮಾಡಲು ಕಿವಿಮಾತು ಹೇಳಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಕೋಡಾಕ್ ಲಾಂಛನವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ನಂತರ ಪಾಲಕರು ಮತ್ತು ಶಿಕ್ಷಕರ ಸಭೆ ಆಯೋಜಿಸಿ, ಅರ್ಧ ವಾರ್ಷಿಕ ವರದಿಯನ್ನು ಮತ್ತು ವಿದ್ಯಾರ್ಥಿಗಳ ಸಾಧನೆಯನ್ನು ಪ್ರದರ್ಶಿಸಲಾಯಿತು.


ಶಾಲೆಯ 16ನೇ ಸಂಸ್ಥಾಪನ ದಿನದ ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
ಪ್ರಾಂಶುಪಾಲ ಕರ್ನಲ್ ಜಿ.ಕಣ್ಣನ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮನ್ ಪ್ರೀತ್ ಸಿಂಗ್, ಶಿಕ್ಷಕ ಎನ್. ವಿ.ಅಶೋಕನ್ ಇತರರು ಇದ್ದರು.