ಚಿತ್ರದುರ್ಗ: ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಪಾಲಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಸಾಧಿಕ್‌ವುಲ್ಲಾ ತಿಳಿಸಿದರು.
ಬಸವ ಮಂಟಪದಲ್ಲಿ ಗುರುವಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಅಂಬೇಡ್ಕರ್ ದಲಿತ ಸಂಘ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಗೌರವಿಸುವವರು ಜಾತಿ ಧರ್ಮದ ನಡುವೆ ದ್ವೇಷ ಬಿತ್ತುವುದಿಲ್ಲ. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ ಹೋರಾಟಕ್ಕೆ ಒತ್ತು ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಮುಂದಾಗಿ ಎಂದು ಸಲಹೆ ನೀಡಿದರು.
ಲೇಖಕ ಎಚ್.ಆನಂದ್‌ಕುಮಾರ್ ಮಾತನಾಡಿ, ದಲಿತ ಚಳವಳಿ ಇಲ್ಲದಿದ್ದರೆ, ಸಮಾಜದಲ್ಲಿ ಅಸಮಾನತೆ ಕಡಿಮೆ ಆಗುತ್ತಿರಲಿಲ್ಲ. ಗೌತಮ ಬುದ್ಧ, ವಿಶ್ವಗುರು ಬಸವಣ್ಣನ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಮಹಿಳೆಯರಿಗೆ ಸಮಾನತೆ ನೀಡಿದ ಅಂಬೇಡ್ಕರ್ ಕುರಿತು ಎಲ್ಲರೂ ಓದಬೇಕಿದೆ. ಸಂವಿಧಾನ ಧ್ವನಿ ಇಲ್ಲದ ಶೋಷಿತರಿಗೆ, ದಲಿತರಿಗೆ, ಬಡವರು ಸೇರಿ ಎಲ್ಲ ಜಾತಿ ಧರ್ಮದವರಿಗೂ ಅವಕಾಶ ನೀಡಿದೆ ಎಂದು ಹೇಳಿದರು.
ಇದೇ ವೇಳೆ ಅನೇಕ ಯುವಕರು ರಕ್ತದಾನ ಮಾಡಿದರು. ಸಂಘದ ಅಧ್ಯಕ್ಷ ಕಿರಣ್, ಕಾರ್ಯಾಧ್ಯಕ್ಷ ಲೋಹಿತ್, ರಮೇಶ್, ವಿವಿಧ ಸಂಘದ ಪದಾಧಿಕಾರಿಗಳಾದ ವೈ.ಕುಮಾರ್, ತಿಪ್ಪೇಸ್ವಾಮಿ, ಕುಮಾರಸ್ವಾಮಿ, ಅರುಣ್‌ಕುಮಾರ್, ಎಸ್.ವೀರೇಶ್, ಮಜಹರ್‌ವುಲ್ಲಾ ಇತರರಿದ್ದರು.