ಜಿಲ್ಲೆ

ಉತ್ತಮ ಸಮಾಜಕ್ಕಾಗಿ ಬುದ್ಧನ ತತ್ವಾದರ್ಶ ಪಾಲಿಸಿ

ಚಿತ್ರದುರ್ಗ: ಬುದ್ಧ, ಬಸವ ಹಾಗೂ ಅಂಬೇಡ್ಕರ್ ಸೇರಿ ಮಹನೀಯರ ತತ್ವಾದರ್ಶ ಪಾಲಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ಕೋಟೆನಾಡು ಬುದ್ಧ ವಿಹಾರ ಕೇಂದ್ರದಲ್ಲಿ ಗುರುವಾರ ವೈಶಾಖ ‘ಬುದ್ಧ ಪೂರ್ಣಿಮೆ’ ಅಂಗವಾಗಿ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುವ ಬದಲು ಬುದ್ಧ ಸೇರಿ ಮಹಾಪುರುಷರ ಜಯಂತಿ ಶಾಲಾ-ಕಾಲೇಜುಗಳಲ್ಲಿ ಆಚರಿಸಿದಾಗ ಅವರ ಕುರಿತು ಅರಿವು ಮೂಡಲಿದೆ. ದೇಶದ ಭವಿಷ್ಯದ ರೂವಾರಿಗಳಾದ ವಿದ್ಯಾರ್ಥಿ ಸಮೂಹ ಸನ್ಮಾರ್ಗದಲ್ಲಿ ನಡೆಯಲು, ಸಮ ಸಮಾಜ ನಿರ್ಮಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಪ್ರಜೆಗಳ ಅಭಿವೃದ್ಧಿಯೇ ದೇಶದ ಪ್ರಗತಿ. ಬುದ್ಧನ ಅನುಯಾಯಿಗಳು ಆತನ ಮಾರ್ಗ ಅನುಸರಿಸುತ್ತಿದ್ದು, ಅಗತ್ಯ ನೆರವು ನೀಡಲು ಸಿದ್ಧ ಎಂದು ಭರವಸೆ ನೀಡಿದರು.

ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ವಿಶ್ವದ ಮೊದಲ ವಿಜ್ಞಾನಿ ಗೌತಮ ಬುದ್ಧ. ಆಧುನಿಕ ಸಮಾಜದ ತಲ್ಲಣಗಳು, ಪರಿಸರ ಮಾಲಿನ್ಯ, ಆರ್ಥಿಕ ಅಸಮಾನತೆ, ಅಸಮತೋಲನ ಇನ್ನೂ ಮುಂತಾದ ಸಮಸ್ಯೆಗಳಿಗೆ ಪರಿಹಾರ ಆತನ ಚಿಂತನೆಗಳಲ್ಲಿದ್ದು, ಅನುಸರಿಸಲು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ಬಿಎಸ್‌ಐ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಪ್ರಾಚಾರ್ಯರಾದ ಸಿದ್ದಲಿಂಗಮ್ಮ, ಬಿ.ಟಿ.ತಿಪ್ಪೇರುದ್ರಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಿ.ಟಿ.ಜಗನ್ನಾಥ್, ಪ್ರೊ.ಎಚ್.ಲಿಂಗಪ್ಪ, ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ನಿವೃತ್ತ ಅಧಿಕಾರಿ ಬಿ.ಪಿ.ಪ್ರೇಮನಾಥ್, ಕೆ.ಆರ್.ಮದ್ದಪ್ಪ, ಕೇಶವಮೂರ್ತಿ, ಜಂಬು ದ್ವೀಪದ ಅಧ್ಯಕ್ಷ ಸಿ.ರಾಮಣ್ಣ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್, ಉಪನ್ಯಾಸಕರಾದ ಜಿ.ಎಸ್.ತಿಪ್ಪೇಸ್ವಾಮಿ, ಬಿ.ಎಂ.ಗುರುನಾಥ್, ವಕೀಲ ಬೆನಕನಹಳ್ಳಿ ಚಂದ್ರಪ್ಪ, ಶಿಕ್ಷಕರಾದ ಬಸವರಾಜ್, ಪ್ರಕಾಶ್, ಜಮುನಾ, ಜಗನ್ನಾಥ್ ಇತರರಿದ್ದರು.