ಚನ್ನರಾಯಪಟ್ಟಣ: ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಹೆಮ್ಮೆಯ ದೇಶ ನಮ್ಮ ಭಾರತ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಕಲೆ ಹಾಗೂ ಸಾಹಿತ್ಯ ಹೊಂದಿದ್ದು ಸಹಬಾಳ್ವೆಯ ತಳಹದಿಯ ಮೇಲೆ ನಿಂತಿದೆ ಎಂದರು.
ಭಾರತೀಯರಾದ ನಾವು ಸರ್ವಧರ್ಮಗಳನ್ನು ಒಪ್ಪಿಕೊಂಡು ವಿವಿಧತೆಯಲ್ಲಿ ಏಕತೆಯನ್ನು ಕಂಡಿದ್ದೇವೆ. ಆದರೆ, ಕೆಲವರು ತಮ್ಮ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ದೇಶ ಒಡೆಯುವಲ್ಲಿ ಮುಂದಾಗಿದ್ದಾರೆ. ಇದನ್ನು ನಾವು ಖಂಡಿಸಲಿದ್ದು ದೇಶ ಹಾಗೂ ಭಾಷೆಯನ್ನು ಗೌರವಿಸುತ್ತೇವೆ. ಸೇಡಿನ ರಾಜಕಾರಣಕ್ಕಿಂತ ಸಹಬಾಳ್ವೆಯ ಸಮಾಜ ಕಟ್ಟುವುದು ಮುಖ್ಯ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮದ ಫಲ ಹಾಗೂ ಕೊಡುಗೆಯಾಗಿ ಸಿಕ್ಕಿರುವ ಸಂವಿಧಾನವನ್ನು ಅಳವಡಿಸಿಕೊಂಡು ನಾವೆಲ್ಲ ಬದುಕುತಿದ್ದೇವೆ. ಇದೇ ಹಾದಿಯಲ್ಲಿ ಯುವ ಸಮುದಾಯವೂ ಸಾಗಬೇಕು. ತಾಲೂಕಿನ ರೈತರಿಗೆ ನೆಮ್ಮದಿ ಕಲ್ಪಿಸುವ ಸಲುವಾಗಿ ನೀರಾವರಿ, ಶಿಕ್ಷಣ, ಆರೋಗ್ಯ, ಹೈನುಗಾರಿಕೆ ಹಾಗೂ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಕೃಷಿ, ಸಾಹಿತ್ಯ, ಆರೋಗ್ಯ, ಶಿಕ್ಷಣ, ಮಾಧ್ಯಮ, ಸಾರಿಗೆ, ಆರಕ್ಷಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಅಭಿನಂದಿಸಲಾಯಿತು. ಇನ್ನು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ರೇಖಾ ಅನಿಲ್, ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಕರೀಗೌಡ, ಇಒ ಸುನೀಲ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಹೇಮಂತ್‌ಕುಮಾರ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ವೆಂಕಟೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಣತಿ ಆನಂದ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್ ಹಾಗೂ ಇತರರು ಇದ್ದರು.