ಚನ್ನರಾಯಪಟ್ಟಣ: ನಾಡು-ನುಡಿ, ನೆಲ-ಜಲ, ಕಲೆ-ಕರಕುಶಲತೆ ಸೇರಿದಂತೆ ಉತ್ತಮ ಸಂಸ್ಕೃತಿಯ ಸಂಪತ್ತಿರುವ ಹೆಮ್ಮರ ಈ ಕನ್ನಡಾಂಬೆ ಎಂದು ದಿಡಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಆರ್.ಮಂಜುನಾಥ್ ಬಣ್ಣಿಸಿದರು.
ತಾಲೂಕಿನ ದಿಡಗ ಗ್ರಾಮದ ಡಾ.ರಾಜ್ ವೃತ್ತದಲ್ಲಿ ಡಾ.ರಾಜ್ ಅಭಿಮಾನಿಗಳ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನಟ ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷೆಯನ್ನು ಪೋಷಿಸಿ, ಬೆಳೆಸುವುದು ನಮ್ಮಲ್ಲರ ಕರ್ತವ್ಯವಾಗಿದೆ. ಕನ್ನಡ ಕೇವಲ ಒಂದು ಭಾಷೆಯಷ್ಟೆ ಅಲ್ಲ, ಸುಲಲಿತ ಸಂಸ್ಕೃತಿಯಾಗಿದ್ದು ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರನ್ನು ಆಕರ್ಷಿಸಿ ನಿಲ್ಲಿಸಬಲ್ಲ ಸಾಮರ್ಥ್ಯ ಕನ್ನಡ ಭಾಷೆಗಿದೆ ಎಂದರು.
ಡಾ.ರಾಜ್ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಆರ್.ರವೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹಕ್ಕೆ ಜೋತು ಬಿದ್ದಿರುವ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತಿದ್ದಾರೆ. ಅಲ್ಲದೇ, ಮನೆಯಲ್ಲಿಯೂ ತಮ್ಮ ಮಕ್ಕಳೊಂದಿಗೆ ಆಂಗ್ಲಭಾಷೆಯಲ್ಲಿಯೇ ಮಾತನಾಡುವ ಗೀಳು ಅಂಟಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ತನ್ನದೇ ಆದ ಮಹತ್ವದ ಸ್ಥಾನಮಾನ ಪಡೆದಿದೆ. ಅನ್ಯ ಭಾಷಿಗರ ಜತೆ ಮಾತನಾಡುವ ವ್ಯಾಮೋಹದ ಬರದಲ್ಲಿ ಮಾತೃಭಾಷೆ ಕನ್ನಡಕ್ಕೆ ಧಕ್ಕೆಯಾಗದಿರಲಿ ಎಂದು ಸಲಹೆ ನೀಡಿದರು.
ಸಂಘದ ಸದಸ್ಯರು ಪಟಾಕಿ ಸಿಡಿಸಿ ಜನತೆಗೆ ಸಿಹಿ ಹಂಚಿ ಸಂಭ್ರಮಿಸಿದರು. ಡಾ.ರಾಜ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಎನ್.ಟಿ.ಜಗದೀಶ್, ಕಾರ್ಯದರ್ಶಿ ಎನ್.ಜೆ.ಬಾಬು, ಖಜಾಂಚಿ ಬಾಬು, ಪ್ರಧಾನ ಅರ್ಚಕ ರಾಮಚಂದ್ರಯ್ಯ, ಪ್ರೌಢಶಾಲೆ ಮುಖ್ಯಶಿಕ್ಷಕ ನೀಲಿಸಿದ್ದು, ಸಂಘದ ಸದಸ್ಯರು, ದಿಡಗ, ನರಿಹಳ್ಳಿ, ಉಳ್ಳಾವಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.