ಜಿಲ್ಲೆ

ಉತ್ತಮ ಸಂಸ್ಕಾರದಿಂದ ಜೀವನ ಪರಿಪೂರ್ಣ : ಶ್ರೀವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯ

ಹಾಸನ: ಉತ್ತಮ ಸಂಸ್ಕಾರ ಮತ್ತು ಆಚರಣೆಗಳಿಂದ ಮಾನವನ ಜೀವನ ಪರಿಪೂರ್ಣಗೊಳ್ಳಲಿದೆ ಎಂದು ಸುಕ್ಷೇತ್ರ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠಾಧ್ಯಕ್ಷರಾದ ಡಾ.ಶ್ರೀವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.


ಶುಕ್ರವಾರ ಅರಸೀಕೆರೆ ನಗರದ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.


ಬದುಕಲು ಹಣದ ಅವಶ್ಯಕತೆ ಇದೆ ಎಂಬುದು ಎಷ್ಟು ಮಹತ್ವ ಪಡೆದುಕೊಂಡಿದೆಯೋ ಸಮಾಜದಲ್ಲಿ ಹೊಂದಿಕೊಂಡು ಬಾಳಲು ಒಳ್ಳೆಯ ಗುಣಗಳು ಇರಬೇಕು ಎಂಬ ಸಂಗತಿಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಸಮಯ, ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಆರೋಗ್ಯಕ್ಕೆ ಬೆಲೆ ಕಟ್ಟಲಾಗದು. ಎಲ್ಲವನ್ನು ಕಳೆದುಕೊಂಡ ನಂತರ ಅವುಗಳ ನಿಜವಾದ ಬೆಲೆ ತಿಳಿಯುತ್ತದೆ. ಚಿನ್ನ ಉಜ್ಜಿದಷ್ಟು ಹೊಳಪು ಹೆಚ್ಚುವಂತೆ ಜೀವನದಲ್ಲಿ ಬರುವ ಕಷ್ಟಗಳು ನಮ್ಮ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತವೆ ಎಂದರು.


ಕೆಟ್ಟ ಅಭ್ಯಾಸ ಇರುವವರನ್ನು ಬದಲಾಯಿಸಬಹುದು. ಆದರೆ ಕೆಟ್ಟ ಯೋಚನೆ ಇರುವವರನ್ನು ಬದಲಿಸುವುದು ಕಷ್ಟವಾಗುತ್ತದೆ. ನಂಬಿಕೆಗೆ ಬೆಲೆ ಕಟ್ಟಲಾಗದು. ಉತ್ತಮ ಎಂದು ಜನರನ್ನು ಸಂಪಾದಿಸಲು ವರ್ಷಗಳು ಬೇಕಾಗಲಿದ್ದು, ಕಳೆದುಕೊಳ್ಳಲು ಒಂದು ಕ್ಷಣ ಸಾಕು. ದೂರ, ದೂರ ನೆಟ್ಟ ಸಸಿಗಳು ಬೆಳೆಯುತ್ತ ಹತ್ತಿರವಾಗುತ್ತವೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಮನುಷ್ಯ ಹುಟ್ಟುವಾಗ ಜತೆಗಿದ್ದು, ಬೆಳೆಯುತ್ತಿದ್ದಂತೆ ಮನಸ್ಸುಗಳು ದೂರವಾಗುತ್ತ ಹೋಗುತ್ತವೆ ಎಂದು ಬೇಸರಿಸಿದರು.


ಬದುಕಿನಲ್ಲಿ ಭರವಸೆ ಇದ್ದರೆ ಭವಿಷ್ಯ ರೂಪಿಸಿಕೊಳ್ಳಬಹುದು. ವೀರಶೈವ ಧರ್ಮದಲ್ಲಿ ಸಕಲರಿಗೂ ಒಳಿತನ್ನೇ ಸದಾ ಬಯಸುವುದಾಗಿದೆ. ಜೀವನ ಮೌಲ್ಯಗಳ ಸಂವರ್ಧನೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ದಾರಿ ದೀಪವಾಗಿವೆ. ಆದರ್ಶ ಚಿಂತನಗಳಿಂದ ಬದುಕನ್ನು ಕಟ್ಟಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಅವಶ್ಯಕತೆಯಿದೆ. ಚತುರ್ವಿಧ ಪರುಷಾರ್ಥಗಳಲ್ಲಿ ಬರುವ ಧರ್ಮ, ಅರ್ಥ, ಕಾಮ, ಮೋಕ್ಷದಲ್ಲಿ ಒಂದನ್ನಾದರೂ ಸಾಧಿಸುವ ಮನಸ್ಥಿತಿ ನಮ್ಮದಾಗಬೇಕು ಎಂದು ಸಲಹೆ ನೀಡಿದರು.


ಇತ್ತೀಚಿನ ದಿನಗಳಲ್ಲಿ ದೇವರು, ಧರ್ಮಾಚರಣೆಯಿಂದ ಆಸ್ತಿ, ಅಧಿಕಾರ ಗಳಿಸುವುದೇ ಪರಮೋಚ್ಚ ಗುರಿಯಾಗಿದೆ. 12 ನೇ ಶತಮಾನದ ಬಸವಾದಿ ಶಿವಶರಣರ ಆಶಯಗಳು ಮನುಕುಲಕ್ಕೆ ಒಳಿತನ್ನೇ ಬಯಸಿವೆ. ಮನುಷ್ಯ ಸಂಕುಚಿತ ಪ್ರವೃತ್ತಿಯಿಂದ ಹೊರ ಬಂದಾಗ ಮಾತ್ರವೇ ಬದುಕು ಹಸನಾಗಲಿದೆ ಎಂದು ಶ್ರೀಗಳು ಕಿವಿಮಾತು ಹೇಳಿದರು.

ಧರ್ಮ, ಸಂಸ್ಕೃತಿಯ ಶಕ್ತಿ ಕುಂದಿಸಲಾಗದು :
ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಏನೂ ಅರ್ಥವಾಗದ ಸನ್ನಿವೇಶದಲ್ಲಿ ಜೀವನ ಪ್ರಾರಂಭಗೊಳ್ಳುತ್ತದೆ. ಆದರೆ ವಾಸ್ತವ ತಿಳಿದುಕೊಳ್ಳುವ ಸಮಯಕ್ಕೆ ಬದುಕಿನ ಪಯಣ ಪೂರ್ಣಗೊಂಡಿರುತ್ತದೆ. ಕತ್ತಲು ಎಷ್ಟೇ ದಟ್ಟವಾದರೂ ಸೂರ್ಯೋದಯವನ್ನು ತಡೆಗಟ್ಟಲಾಗದು ಎನ್ನುವ ಸತ್ಯವನ್ನು ಅರಿಯುವ ಅಗತ್ಯವಿದೆ. ಕೆಟ್ಟ ವಿಚಾರಗಳು ಬೇಕಾದಷ್ಟಿದ್ದರೂ ಧರ್ಮ ಸಂಸ್ಕೃತಿಯ ಶಕ್ತಿ ಕುಂದಿಸಲಾಗದು ಎಂದರು.

ಅರಸೀಕೆರೆ ಜಿಲ್ಲಾ ಕೇಂದ್ರವಾಗಲಿ
ಮಾಜಿ ಶಾಸಕ ಕೆ.ಪಿ.ಪ್ರಭುಕುಮಾರ್ ಮಾತನಾಡಿ, ತಾಲೂಕಿನ ಬರದ ಬವಣೆ ಶಾಶ್ವತವಾಗಿ ನೀಗಬೇಕಿದ್ದಲ್ಲಿ ಬಯಲು ಸೀಮೆ ಜನರ ಒತ್ತಾಸೆಯಂತೆ ಅರಸೀಕೆರೆ ತಾಲೂಕು ಜಿಲ್ಲಾ ಕೇಂದ್ರವಾಗಿ ಪರಿವರ್ತಿತವಾಗಬೇಕು. ರಾಜಕೀಯ ಮುಖಂಡರು ಹಾಗೂ ಹರಗುರು ಚರಮೂರ್ತಿಗಳು ಇಂತಹ ಮಹತ್ವದ ಕಾರ್ಯಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಹಾಗೂ ಯುವಕ, ಯುವತಿಯರು ಹೆಚ್ಚು ಸಕ್ರಿಯರಾಗಿ ಪಾಲ್ಗೊಂಡು ಧಾರ್ಮಿಕ ಪರಂಪರೆ ಎತ್ತಿ ಹಿಡಿಯಬೇಕು ಎಂದರು.


ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ ಮಾತನಾಡಿ, ನಾಡಿನ ಅಭ್ಯುದಯಕ್ಕೆ ಮಠ, ಮಾನ್ಯಗಳ ಕೊಡುಗೆ ಏನೆಂಬುದರ ಕುರಿತು ವಿವರಿಸಿದರು.
ಹೊನ್ನವಳ್ಳಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ , ನುಗ್ಗೇಹಳ್ಳಿ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಡಿ.ಎಂ.ಕುರ್ಕೆ ಶಶಿಶೇಖರ ಸಿದ್ಧಬಸವ ಶ್ರೀಗಳು ಮಾತನಾಡಿದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಸಿ.ಗಿರೀಶ್, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಇಷ್ಟಲಿಂಗ ಪೂಜಾ ಸಮಿತಿ ಅಧ್ಯಕ್ಷ ಸಿ.ಜೆ.ರಾಜು, ವಕೀಲ ಕೆ.ಎಸ್.ಲೋಕೇಶಕುಮಾರ್, ಮುಖಂಡರಾದ ನಾಗಭೂಷಣ್, ಮಲ್ಲೇಶ್, ರಾಜಣ್ಣ, ಪುರಿ ನಾಗೇಶ್, ಹರಳಕಟ್ಟ ಶಂಕರಪ್ಪ, ರಾಜಕುಮಾರ್ ಇನ್ನಿತರರಿದ್ದರು.