ಚಿಕ್ಕನಾಯಕನಹಳ್ಳಿ: ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವುದರೊಂದಿಗೆ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಅವರ ಸ್ವಂತ ಜೀವನ ರೂಪಿಸಿಕೊಂಡರೆ ಅದೇ ಈ ಕ್ಷೇತ್ರಕ್ಕೆ, ಪಾಲಕರಿಗೆ ನೀಡುವ ಗೌರವ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಸೋಮವಾರ ಎಸ್.ಬಿ.ಚಾರಿಟಬಲ್ ಟ್ರಸ್ಟ್ನಿಂದ ಏರ್ಪಡಿಸಿದ್ದ ನಮಗೆ ಪ್ರೇರಣೆ ನಮ್ಮ ಮೇಷ್ಟ್ರು ಎಂಬ ರ್ಶಿಷಿಕೆಯಡಿ ಎಸ್ಎಸ್ಎಲ್ಸಿಯಲ್ಲಿ 625ಕ್ಕೆ 600ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದ ತಾಲೂಕಿನ 44 ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣಾದಾಯಿಗಳಾದ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಯ ಎಲ್ಲ ಶಿಕ್ಷಕರನ್ನೊಳಗೊಂಡ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಬಿಇಒ ನೇತೃತ್ವದಲ್ಲಿ ಉತ್ತಮವಾದ ಪ್ರೇರಣಾ ಶಿಬಿರಗಳೊಂದಿಗೆ ಮಕ್ಕಳ ಹಾಗೂ ಪಾಲಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಈ ಬಾರಿ ನಮ್ಮ ಕ್ಷೇತ್ರದಲ್ಲಿ ಎಸ್ಎಸ್ಎಲ್ಸಿಯಲ್ಲಿ 600ಕ್ಕೂ ಹೆಚ್ಚು ಅಂಕಗಳನ್ನು 44 ವಿದ್ಯಾರ್ಥಿಗಳು ಪಡೆಯಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ ಅಭಿನಂದಿಸಿದ್ದು, ಇದಕ್ಕೆ ಕಾರಣರಾದ ಶಿಕ್ಷಕರನ್ನು ಗೌರವಿಸಬೇಕಾಗಿರುವುದು ನಮ್ಮ ಜವಾಬ್ದಾರಿ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ರೀತಿ ನಮ್ಮ ಟ್ರಸ್ಟ್ ವತಿಯಿಂದ ಸಿಇಟಿ ತರಬೇತಿ ಹಮ್ಮಿಕೊಂಡಿದ್ದು, ಈ ಬಾರಿ ಸರ್ಕಾರಿ ಕೋಟಾದಡಿ ವಿವಿಧ ಕೋರ್ಸ್ಗಳಿಗೆ ಹೋಗುವ ವಿದ್ಯಾರ್ಥಿಗಳಿಗ ಟ್ಯಾಬ್ ನೀಡುವ ಉದ್ದೇಶ ಹೊಂದಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು. ಒಬ್ಬ ವಿದ್ಯಾರ್ಥಿ ಉತ್ತಮವಾಗಿ ಶಿಕ್ಷಣ ಪಡೆದು ಪಾಲಕರಿಗೆ ಹೊರೆಯಾಗದ ರೀತಿಯಲ್ಲಿ ಜೀವನ ಕಟ್ಟಿಕೊಂಡರೆ ಅದೇ ನಮಗೆ ಸಂತೋಷ. ಇದರಲ್ಲಿ ಯಾವುದೆ ರಾಜಕೀಯವಿಲ್ಲ, ನಾವು ಯಾವುದೇ ಪಕ್ಷ, ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ಭೇದಭಾವ ಮಾಡದೆ ಈ ಕೆಲಸ ಮಾಡುತ್ತಿದ್ದು, ಇದರೊಂದಿಗೆ ಪ್ರತಿ ಸೋಮವಾರ ಇದೇ ಭವನದಲ್ಲಿ ಜನ ಸಂಪರ್ಕಸಭೆ ನಡೆಸುತ್ತಿದೆ. ಇಲ್ಲಿಗೆ 66 ವಾರಗಳು ಕಳೆದಿವೆ ಇದು ನಮ್ಮ ಹಾಗೂ ನಮ್ಮ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸರಿಯಾದ ಪರಿಹಾರ ನೀಡುವುದಾಗಿದೆ. ಮನೆಬಾಗಿಲಿಗೆ ಮನೆಮಗ ಎಂಬ ಕಾರ್ಯಕ್ರಮದಲ್ಲಿ ಪ್ರತಿ ಗ್ರಾಮಗಳನ್ನು ಭೇಟಿ ಮಾಡಿ ಅಲ್ಲಿನ ಜನರ ಕಷ್ಟ ಸಮಸ್ಯೆ ಆಲಿಸಿ ಅದಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಬಿಇಒ ಕಾಂತರಾಜು ಮಾತನಾಡಿ, ರಾಜ್ಯದಲ್ಲೇ ಈ ರೀತಿಯ ಕಾರ್ಯಕ್ರಮ ಯಾರು ಮಾಡಿರಲು ಸಾಧ್ಯವಿಲ್ಲ ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ಶಾಸಕರು ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಅವರ ಪ್ರೆರಣೆ ಹಾಗೂ ಪ್ರಶಂಸೆಯ ಮಾತುಗಳೇ ನಮಗೆ ಈ ಸಾಧನೆಗೆ ಕಾರಣವಾಗಿದೆ. ಪ್ರತಿವರ್ಷ
ಮಂಗಳೂರು, ಉಡುಪಿ ಜಿಲ್ಲೆಗಳೇ ಮೊದಲ ಸ್ಥಾನಗಳನ್ನು ಪಡೆಯುತ್ತಿವೆ. ಕಾರಣ ಅಲ್ಲಿನ ಶಿಕ್ಷಕರು ಪಾಲಕರು ಹಾಗೂ ವಿದ್ಯಾರ್ಥಿಗಳಲ್ಲಿನ ಬದ್ಧತೆ ಹಾಗೂ ಬಾಂಧ್ಯವೇ ಕಾರಣ. ನಮ್ಮಲ್ಲೂ ಆ ರೀತಿಯಲ್ಲಿ ಕೆಲಸ ಮಾಡಿದರೆ ನಮ್ಮ
ತಾಲೂಕು ಜಿಲ್ಲೆ ಪ್ರಥಮವಾಗಿರುವುದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುತ್ತದೆ ಎಂದರು. ಸಾಧನೆ ಮಾಡಿದ ವಿದ್ಯಾರ್ಥಿಗಳು, ಇದಕ್ಕೆ ಕಾರಣ ಶಿಕ್ಷಕರು ಅಭಿಪ್ರಾಯ ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳ ಸಾಧನೆಗೆ ಕಾರಣರಾದ ಶಿಕ್ಷಕರಿಗೆ ವಿದ್ಯಾರ್ಥಿಗಳಿಂದಲೇ ಸನ್ಮಾನ ಮಾಡಿಸಲಾಯಿತು.