ಸೇಡಂ: ವಿದ್ಯಾರ್ಥಿ ಜೀವನದ ನಂತರ ವೃತ್ತಿ ಜೀವನಕ್ಕೆ ಕಾಲಿಡುವುದು ಸಹಜ. ನಮ್ಮ ವೃತ್ತಿ ಜತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡಾಗ ಬದುಕು ಸುಂದರವಾಗುತ್ತದೆ ಎಂದು ಕಲಬುರಗಿ ರಂಗಾಯಣದ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಎಲ್ಲರಲ್ಲಿ ಒಂದಿಲ್ಲೊAದು ಕಲೆ ಅಡಗಿರುತ್ತದೆ. ಅದನ್ನರಿತು ಆ ಕಲೆ ಸಾಕಾರಗೊಳಿಸಲು ಪ್ರಯತ್ನಿಸಬೇಕು. ಜೀವನ ಒಂದು ರೀತಿಯ ಯುದ್ಧ ಇದ್ದಂತೆ. ಸಣ್ಣ ಪುಟ್ಟ ಸೋಲಿಗೆ ಹತಾಶರಾಗದೆ ಮನಸ್ಸನ್ನು ನಿಗ್ರಹದಲ್ಲಿ ಇರಿಸಿಕೊಂಡು ಸಾಧನೆಯ ಗಮ್ಯದ ಕಡೆ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.
ಮೊಬೈಲ್ ಸೇರಿ ನಮ್ಮನ್ನು ನಿಯಂತ್ರಿಸಬಲ್ಲ ಅನೇಕ ಶಕ್ತಿಗಳು ಇಂದು ಸುತ್ತಲೂ ತಾಂಡವವಾಡುತ್ತಿವೆ. ಅವುಗಳ ಆಕರ್ಷಣೆಗಿಂತ ನಿಮ್ಮ ನಿಯಂತ್ರಣವೇ ಆ ಶಕ್ತಿಗಳಿಂದ ಆಗುವ ದುಷ್ಪರಿಣಾಮ ತಡೆಯುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಬಸವರಾಜ ಕೊನೇರಿ, ಪ್ರತಿಷ್ಠಾನದ ಸಂಸ್ಥಾಪಕ ನಾಗಯ್ಯ ಸ್ವಾಮಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ಸಾಹಿತಿ ಸಿದ್ದಪ್ಪ ತಳ್ಳಳ್ಳಿ, ಡಾ.ಶಶಿಶೇಖರರೆಡ್ಡಿ, ಡಾ.ಮಲ್ಲಿಕಾರ್ಜುನ, ಡಾ.ವಿಲಾಸ ಸಾಳುಂಕೆ ಇದ್ದರು.