ಜಿಲ್ಲೆ

ಉತ್ತಮ ವ್ಯಕ್ತಿತ್ವ ನಿರ್ಮಾಣ ಆರ್‌ಎಸ್‌ಎಸ್ ಗುರಿ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇದೆ ಎಂದು ಆರ್‌ಎಸ್‌ಎಸ್ ಕೋಲಾರ ಜಿಲ್ಲಾ ವಿಭಾಗೀಯ ಕಾರ್ಯವಾಹ ಸಿದ್ದಲಿಂಗೇಶ್ವರ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಅವರಣದಲ್ಲಿ ಆರ್‌ಎಸ್‌ಎಸ್‌ನಿಂದ ಭಾನುವಾರ ಆಯೋಜಿಸಿದ್ದ ವಿಜಯದಶಮಿ ಪಥ ಸಂಚಲನದಲ್ಲಿ ಮಾತನಾಡಿದರು.
ಶತಮಾನದ ಅಂಚಿನಲ್ಲಿರುವ ಸಂಘ ದೇಶದಾದ್ಯಂತ ಕೋಟ್ಯಾಂತರ ಮಂದಿ ಕಾರ್ಯಕರ್ತರನ್ನು ಒಳಗೊಂಡಿದೆ. ಆರ್‌ಎಸ್‌ಎಸ್ ದೇಶದಲ್ಲಿ ಬಾಲಕರಿಂದ ಹಿಡಿದು 80 ವರ್ಷದ ವೃದ್ಧರನ್ನೂ ಒಳಗೊಂಡಿರುವ ಏಕೈಕ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಸನಾತನ ಹಿಂದು ಧರ್ಮದ ಉಳಿವು ಹಾಗೂ ರಕ್ಷಣೆಗೆ ಸಂಘ ನಿತ್ಯ ಶ್ರಮಿಸುತ್ತಿದೆ. ಸಂಸ್ಕೃತಿ, ಸಂಘಟಿತ ಹಿಂದು ಸಮಾಜವನ್ನು ನಿರ್ಮಾಣ ಮಾಡುವ ಮಹತ್ವದ ಗುರಿ ಸಂಘದ್ದಾಗಿದೆ. ಹಿಂದು ಸಮಾಜದಲ್ಲಿ ಬಲಿಷ್ಠ ಮತ್ತು ದುರ್ಬಲ ಜಾತಿಗಳು ಒಗ್ಗೂಡಿದಾಗ ಮಾತ್ರ ಪರಿಪೂರ್ಣ ಹಿಂದು ಸಮಾಜದ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದರು. ದೇಶಭಕ್ತರನ್ನು ಹುಟ್ಟು ಹಾಕುವ ಮೂಲಕ ಹಿಂದು ಸಮಾಜವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸ್ವಯಂಸೇವಕ ಸಂಘ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸ್ವದೇಶಿ ಪರಿಕಲ್ಪನೆಯನ್ನು ಪ್ರತಿಯೊಬ್ಬ ಮೈಗ್ಗೂಡಿಸಿಕೊಳ್ಳಬೇಕಿದೆ. ಸ್ವದೇಶಿ ಎಂದರೆ ಕೇವಲ ವಸ್ತುಗಳಲ್ಲ, ಸ್ವದೇಶಿ ಅಲೋಚನೆ, ಮಾತು, ಸಂಸ್ಕೃತಿ, ಸಂಸ್ಕಾರವನ್ನು ಅಳವಡಿಸಿಕೊಳ್ಳವ ಕೆಲಸ ಮಾಡಬೇಕು ಎಂದರು. ಆರ್‌ಎಸ್‌ಎಸ್ ಜಿಲ್ಲಾ ವ್ಯವಸ್ಥಾ ಪ್ರಮುಖ್ ಪೂರ್ಣಚಂದ್ರ, ಸ್ವಯಂಸೇವಕರಾದ ವೀರಭದ್ರಪ್ಪ, ಎನ್.ಎಂ.ರಾಮು, ವಿಜಯ್ ಕುಮಾರ್, ರಾಮಕೃಷ್ಣಪ್ಪ, ಸಪ್ತಗಿರಿ ಶಂಕರ್ ನಾಯಕ್, ಜಗದೀಶ್ ಚೌಧರಿ, ಕೆ.ಪಿ.ಬೃಂಗೇಶ್, ಎಂ.ಟಿ.ನವೀನ್ ಕುಮಾರ್, ಸಿದ್ದರಾಜು, ಕೃಪಾನಂದ್, ರಾಮಮೂರ್ತಿ, ಕೇಶವ್, ಸುಬ್ರಮಣಿ, ಅರುಣ್ ರಾಜ್, ಎನ್.ಸಿ.ರುದ್ರೇಶ್, ಮಂಜುನಾಥ್ ಇದ್ದರು.

ಮಳೆಯಲ್ಲೂ ಪಥಸಂಚಲನ: ವಿಜಯದಶಮಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಭಾನುವಾರ ಬೆಳಗ್ಗೆ ಮಳೆಯ ಮಧ್ಯೆಯೂ ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಿಂದ ಸಂತೆ ಬೀದಿ ಮಾರ್ಗವಾಗಿ, ನಗರದ ಮುಖ್ಯರಸ್ತೆ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಅಡೇಪೇಡೆ ಪೇಟೆ ಮೂಲಕ ಚನ್ನಪ್ಪ ಬಡಾವಣೆಯ ವೀರಾಂಜನೇಯಸ್ವಾಮಿ ದೇವಾಲಯದಿಂದ ಬಸವಣ್ಣ ದೇವರ ಮಠದವರೆಗೂ ಸುಮಾರು 300ಕ್ಕೂ ಹೆಚ್ಚು ಮಂದಿ ಸ್ವಯಂಸೇವಕರು ಪಥಸಂಚನ ನಡೆಸಿದರು.