ಜಿಲ್ಲೆ

ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ

ಆಲೂರು: ಶಿಕ್ಷಕರು ನಿವೃತ್ತರಾದರೂ ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ತಮ್ಮ ಸೇವೆ ಸಲ್ಲಿಸಿದರೆ ವೃತ್ತಿಗೆ ಗೌರವ ದೊರಕುತ್ತದೆ ಎಂದು ನಿವೃತ್ತ ಶಿಕ್ಷಕ ಹೊಳೆನರಸೀಪುರ ತಾಲೂಕು ಹರದನಹಳ್ಳಿ ಗ್ರಾಮದ ಸುಬ್ರಾಯಗೌಡ ತಿಳಿಸಿದರು.


ಸಿಂಗಟಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಗುರು ಶಿಷ್ಯರ ಪುನರ್ಮಿಲನ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದುದು. ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಜತೆಗೆ ಮಕ್ಕಳ ಭವಿಷ್ಯದ ಬಗ್ಗೆಯೂ ಚಿಂತನೆ ಮಾಡಬೇಕು ಎಂದರು.


ಸಿಂಗಟಗೆರೆ ಗ್ರಾಮದ ಗ್ರಾಮಸ್ಥರು ಹಾಗೂ ಈ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು ತಮಗೆ ಪಾಠ ಹೇಳಿಕೊಟ್ಟ ಶಿಕ್ಷಕರನ್ನು ಗೌರವಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಶಿಕ್ಷಕರು ವೃತ್ತಿ ಗೌರವ ಕಾಪಾಡಿಕೊಂಡರೆ, ವಿದ್ಯಾರ್ಥಿಗಳು ತಮ್ಮ ಉಸಿರು ಇರುವವರೆಗೂ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಮಾತ್ರ ನೀಡದೆ, ಅವರ ಭವಿಷ್ಯ ರೂಪಿಸುವಲ್ಲಿಯೂ ಪಾತ್ರವಹಿಸಬೇಕು ಎಂದರು.


ಶಿಕ್ಷಕಿ ಸುಕನ್ಯಾ ಮಾತನಾಡಿದರು. ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 30 ಶಿಕ್ಷಕರನ್ನು ಸನ್ಮಾನಿಸಲಾಯಿತು. ಗ್ರಾಮದ ಹಿರಿಯ ವಿದ್ಯಾರ್ಥಿಗಳಾದ ತಾರಾ, ಸ್ವಪ್ನಾ, ಕಟ್ಟೆಗದ್ದೆ ನಾಗರಾಜು, ಬೋಜರಾಜು ಹಾಗೂ ಗ್ರಾಮಸ್ಥರು ಸೇರಿದಂತೆ ಇತರರಿದ್ದರು.