ಜಿಲ್ಲೆ

ಉತ್ತಮ ಮೌಲ್ಯದಿಂದ ಬದುಕು ಸುಂದರ

ಕೊರಟಗೆರೆ: ಪ್ರತಿಯೊಬ್ಬರೂ ಮೌಲ್ಯಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವುಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವುದಿಲ್ಲ ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

ಪಟ್ಟಣದ ಜಗಜ್ಯೋತಿ ಬಸವೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ವಿಶೇಷ ಸೋಮವಾರ ಪೂಜೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ನಮಗೆ ಒಳ್ಳೆಯದು, ಕೆಟ್ಟದ್ದು ಎಲ್ಲ ತಿಳಿದಿರುತ್ತದೆ. ಆದರೆ ತಿಳಿದಷ್ಟರಲ್ಲಿ ಸಾಕಾಗುವುದಿಲ್ಲ, ಅದನ್ನು ಜೀವನದಲ್ಲಿ ಆಚರಣೆಗೆ ತರುವುದೇ ಮುಖ್ಯ. ಮೌಲ್ಯಗಳನ್ನು ಮಾತಿಗಷ್ಟೆ ಸೀಮಿತಗೊಳಿಸದೆ ನಡೆ-&ನುಡಿಯಲ್ಲಿ ಪ್ರತಿಬಿಂಬಿಸುವಂತೆ ನೋಡಿಕೊಂಡಾಗ ಮಾತ್ರ ನಿಜವಾದ ಧಾರ್ಮಿಕತೆ ಸಾಧ್ಯ ಎಂದರು.

ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಬಸವೇಶ್ವರಸ್ವಾಮಿ, ಈಶ್ವರ ಮತ್ತು ಇತರ ದೇವರಿಗೆ ಪ್ರಧಾನ ಅರ್ಚಕ ವಿನಯ್​ ಕುಮಾರ್​ ನೇತೃತ್ವದಲ್ಲಿ ಪೂಜೆ ಆಯೋಜಿಸಲಾಗಿತ್ತು. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ದೇವಾಲಯ ಸಮಿತಿಯಿಂದ ಅನ್ನ ದಾಸೋಹ ಆಯೋಜಿಸಲಾಗಿತ್ತು.

ಜಗಜ್ಯೋತಿ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಂ.ಸುರೇಶ್​, ಕಾರ್ಯದರ್ಶಿ ಜಗದೀಶ್​, ಖಜಾಂಚಿ ಕೆ.ಆರ್​.ಕಿರಣ್​, ವೀರಶೈವ ಲಿಂಗಾಯತ ಸರ್ಕಾರಿ ನೌಕರರ ಕಾಳಪ್ಪ, ಮುಖಂಡರಾದ ಡಾ.ಶುಭಾ, ಸದಾಶಿವಯ್ಯ, ಪರ್ವತಯ್ಯ, ವೀರೇಶ್​, ಆರಾಧ್ಯ, ಎಚ್​.ಎಂ.ಮಹಾಂತೇಶ್​, ಷಣ್ಮುಗ ಇತರರು ಇದ್ದರು.