ಚನ್ನರಾಯಪಟ್ಟಣ ತಾಲೂಕಿನ ಅಲ್ಲೋನ್ಸ್ ನಗರದ ಸೇಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಅಧಿಕಾರಿಯಾಗಿರುವ ಶಾಲೆಯ ಹಳೇ ವಿದ್ಯಾರ್ಥಿ ಎನ್.ಎಂ. ಶಶಾಂತ್ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಿದರು. ಫಾದರ್ ಮೈಕಲ್ ಮರಿ, ಸಿಸ್ಟರ್ ಬೀನಾ ಎಲ್ಲೂರ್ಕರ್, ಸಿ.ಎನ್ .ವೆಂಕಟೇಶ್, ಕೋಮಲಾಕ್ಷಿ, ಎಸ್.ಕೆ ರಘು, ವಸಂತ ದಿನೇಶ್, ಎಚ್.ಎನ್.ದೀಪ, ,ಸಿಸ್ಟರ್ ರೀಟಾ ಮೇರಿ ಮಿಸ್ಕಿತ್, ಫಾದರ್ ಜೆರೊಮ್ ಲೋಬೊ, ಫಾದರ್ ಸಂಜಯ್ ಡಿಸೋಜ, ಸಿಸ್ಟರ್ ಮಾರ್ಥ, ಸೇರಿದಂತೆ ಇತರರು ಇದ್ದರು 
ಜಿಲ್ಲೆ

ಉತ್ತಮ ಭವಿಷ್ಯಕ್ಕೆ ಸತತ ಪರಿಶ್ರಮ ಅಗತ್ಯ

ಚನ್ನರಾಯಪಟ್ಟಣ: ವಿದ್ಯಾರ್ಥಿಗಳು, ಜೀವನದಲ್ಲಿ ಗುರಿ ಮತ್ತು ಛಲ ಬೆಳೆಸಿಕೊಳ್ಳುವುದರ ಜತೆಗೆ ಕಠಿಣ ಪರಿಶ್ರಮದ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಅಲ್ಲೋನ್ಸ್ ನಗರ ಧರ್ಮಕೇಂದ್ರದ ಧರ್ಮಗುರು ಫಾದರ್ ಮೈಕಲ್ ಮರಿ ತಿಳಿಸಿದರು.

ತಾಲೂಕಿನ ಅಲ್ಲೋನ್ಸ್ ನಗರದ ಸೇಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಸತತ ಪರಿಶ್ರಮ ಪಡಬೇಕು. ಓದು ಬರಹದ ಜತೆಗೆ ಉತ್ತಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಢಿಸಿಕೊಳ್ಳುವುದು ಒಳ್ಳೆಯ ಬೆಳವಣಿಯಾಗಿದೆ ಎಂದರು.

ಹಲವು ವಿದ್ಯಾರ್ಥಿಗಳು ಕೇವಲ ಮೊಬೈಲ್, ಟಿವಿಗೆ ಅಂಟಿಕೊಂಡಿರುತ್ತಾರೆ. ಮತ್ತೆ ಕೆಲವರು ಯಾರೊಂದಿಗೂ ಬೆರೆಯದೆ ಒಬ್ಬಂಟಿಯಾಗಿರಲು ಬಯಸುತ್ತಾರೆ. ಆದರೆ ವಿದ್ಯಾರ್ಥಿ ಜೀವನದಿಂದಲೇ ಸಮಯ ಪಾಲನೆ, ಆರ್ಥಿಕ ಶಿಸ್ತು, ಸಾಮಾಜಿಕ ಶಿಸ್ತು, ದೇಹಾರೋಗ್ಯ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಧನಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಪ್ರಾಪಂಚಿಕ ಜ್ಞಾನವನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಬೇಕು. ಕೀಳರಿಮೆ ತೊರೆದು ಗುರು ಹಿರಿಯರನ್ನು ಗೌರವಿಸಬೇಕು. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಮಾತನಾಡಿ, ಮಕ್ಕಳ ಬಗ್ಗೆ ಪಾಲಕರಿಗೆ ಇರುವಷ್ಟೇ ಜವಾಬ್ದಾರಿ ಶಿಕ್ಷಕರಿಗೂ ಇರುತ್ತದೆ. ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಇರುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುತ್ತಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಸೇಂಟ್ ಮೇರಿಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಜತೆಗೆ ಬದುಕುವ ಕಲೆ, ಸಂಸ್ಕಾರ ಹಾಗೂ ಗುಣವಂತಿಕೆಯನ್ನು ಬೆಳೆಸುವ ಶಾಲೆಯಾಗಿದೆ ಎಂದರು.

ವಿದ್ಯಾಸಂಸ್ಥೆ ಅಧ್ಯಕ್ಷೆ ಸಿಸ್ಟರ್ ಬೀನಾ ಎಲ್ಲೂರ್ಕರ್ ಮಾತನಾಡಿ, ಮಕ್ಕಳು ಚಿಕ್ಕಂದಿನಿಂದಲೇ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗ ವಹಿಸುವುದರಿಂದ ಬುದ್ಧಿಶಕ್ತಿಯೊಂದಿಗೆ ಧೈರ್ಯ ಹೆಚ್ಚಲಿದೆ. ಇದಕ್ಕೆ ಪಾಲಕರ ಸಹಕಾರವೂ ಅಗತ್ಯ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಅಧಿಕಾರಿಯಾಗಿರುವ ಶಾಲೆಯ ಹಳೇ ವಿದ್ಯಾರ್ಥಿ ಎನ್.ಎಸ್. ಶಶಾಂತ್ ಅವರನ್ನು ಅಭಿನಂದಿಸಲಾಯಿತು. ಅಲ್ಲದೆ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್ . ವೆಂಕಟೇಶ್, ನೊರನಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೋಮಲಾಕ್ಷಿ, ಉಪಾಧ್ಯಕ್ಷ ಎಸ್.ಕೆ. ರಘು, ಸದಸ್ಯೆ ವಸಂತ ದಿನೇಶ್, ಶಿಕ್ಷಣ ಸಂಯೋಜಕ ಎ.ಶಿವಾನಂದ, ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ್, ಸರ್ಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಿ.ಪ್ರಕಾಶ್ ಕುಮಾರ್, ಸಿಸ್ಟರ್ ರೀಟಾ ಮೇರಿ ಮಿಸ್ಕಿತ್, ಫಾ. ಜೆರೊಮ್ ಲೋಬೊ, ಫಾ. ಸಂಜಯ್ ಡಿಸೋಜ, ಇಸಿಒಗಳಾದ ಜಯಪ್ರಕಾಶ್, ಶ್ರೀನಿವಾಸ್, ವಿದ್ಯಾಸಂಸ್ಥೆ ಜಂಟಿ ಕಾರ್ಯದರ್ಶಿ ಸಿಸ್ಟರ್ ಮಾರ್ಥ ಇತರರು ಇದ್ದರು.