ಜಿಲ್ಲೆ

ಉತ್ತಮ ಭವಿಷ್ಯಕ್ಕೆ ದುಶ್ಚಟಗಳು ಮಾರಕ

ಚಿತ್ರದುರ್ಗ: ಯುವಜನರು ದುಶ್ಚಟಗಳಿಂದ ದೂರವುಳಿದು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಗುರಿ ಸಾಧನೆ ಸಾಧ್ಯವಾಗಲಿದೆ ಎಂದು ಕು ಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು.

ಜಿಲ್ಲಾಡಳಿತ,ಜಿಪಂ,ನೆಹರು ಯುವ ಕೇಂದ್ರದ ಆಶ್ರಯದಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಮಾತನಾಡಿ,ಯುವಕರಿಂದು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅವುಗಳನ್ನು ತೊರೆದು ಓದು, ಕ್ರೀಡೆ, ಕಲೆ, ಸಾಂಸ್ಕೃತಿಕ ಮೊದಲಾದ ಸೃಜನಾತ್ಮಕ ಚಟುವಟಿಗಳಲ್ಲಿ ತೊಡಗಿಸಿಕೊಳ್ಳಬೇಕು. ಲಭ್ಯ ಅವಕಾಶಗಳನ್ನು ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳ ಬೇಕು. ಆ ಮೂಲಕ ನಾಡಿಗೆ ಕೀರ್ತಿ ತರಬೇಕೆಂದರು.

ಎಸಿ ಎಂ.ಕಾರ್ತಿಕ್ ಮಾತನಾಡಿ, ಪ್ರಸ್ತುತ ಶಿಕ್ಷಣ ಜತೆ ವಿವಿಧ ಕೌಶಲಗಳ ಕಲಿಕೆ ಅಗತ್ಯವಿದೆ. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳ ಬೇಕು. ಆ ಟೋಟಗಳು ದೈಹಿಕ ಮತ್ತು ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತವೆ ಎಂದರು. ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಸುಹಾಸ್ ಮಾತನಾಡಿ,ಸಂತ ಶ್ರೇಷ್ಠ ಸ್ವಾಮಿ ವಿವೇಕಾನಂದರ ನೆನಪಿನಾರ್ಥ ಪ್ರತಿ ವರ್ಷ ಜನವರಿ 12ರಿಂದ ಯುವಜನೋತ್ಸವ ಆಚರಿಸಲಾಗುತ್ತದೆ.

ಇದರ ಅಂಗವಾಗಿ ಕಥೆ,ಕವನ,ಭಾಷಣ,ಕವನ ಬರಹ, ಭಾಷಣ, ಚಿತ್ರಕಲೆ, ವಿಜ್ಞಾನ ಮೇಳ, ಮೊಬೈಲ್ ಫೋಟೊಗ್ರಫಿ,ಉತ್ತಮ ಕರಕುಶಲ ವಸ್ತು ಪ್ರದರ್ಶನ, ಸಿದ್ಧ ಉಡುಪು ಹಾಗೂ ಆಹಾರ ಸಂಸ್ಕರಣೆ ಸೇರಿದಂತೆ 11 ಸ್ಫರ್ಧೆಗಳನ್ನು ಜಿಲ್ಲಾಮಟ್ಟದಲ್ಲಿ ಆಯೋಜಿಸಲಾಗಿದೆ ಎಂದರು. ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ,ಪ್ರತಿಯೊಬ್ಬರಲ್ಲೂ ಪ್ರತಿಭೆ,ಕಲೆ ಕೌಶಲಗಳಿರುತ್ತವೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಲ್ಲಿರುವ ಪ್ರತಿಭೆ ಗಳನ್ನು ಗುರುತಿಸಿ ಪ್ರೋತ್ಸಾಹಿಸ ಬೇಕಿದೆ ಎಂದರು.

ಸ್ವಾಮಿ ವಿವೇಕಾನಂದ ರಾಜ್ಯಯುವ ಪ್ರಶಸ್ತಿ ಪುರಸ್ಕೃತರಾದ ಡಿ.ಶ್ರೀಕುಮಾರ್,ಪ್ರತಾಪ್ ಜೋಗಿ, ಸಿ.ಎನ್.ವೆಂಕಟೇಶ್, ಲಕ್ಷ್ಮೀ, ಹಿರಿಯೂರು ಚಿತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ವಿಜ್ಞಾನ ಕಾಲೇಜು ಉಪನ್ಯಾಸಕ ನಾಗರಾಜ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಅಂತ್ಯೋದಯ ಕಲ್ಚರಲ್ ಫೌಂಡೇಷನ್ ಅಧ್ಯಕ್ಷ ಡಿ.ಒ.ಮುರಾರ್ಜಿ ಮತ್ತಿತರರು ಇದ್ದರು.