ಜಿಲ್ಲೆ

ಉತ್ತಮ ಭವಿಷ್ಯಕ್ಕಾಗಿ ಜವಾಬ್ದಾರಿಯಿಂದ ಓದಿ

ವಿದ್ಯಾರ್ಥಿಗಳಿಗೆ ಶಾಸಕ ಸಿ.ಬಿ.ಸುರೇಶ್​ಬಾಬು ಸಲಹೆ

ಚಿಕ್ಕನಾಯಕನಹಳ್ಳಿ : ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಒಂದು ತಿರುವು. ಈ ಅವಧಿಯಲ್ಲಿ ಜವಾಬ್ದಾರಿಯಿಂದ ಓದಬೇಕು. ಕೇವಲ ಸ್ಪರ್ಧೆಗಾಗಿ ಅಧ್ಯಯನ ಮಾಡದೇ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಅಧ್ಯಯನ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.

ಪಟ್ಟಣದ ತೀನಂಶ್ರೀಭವನದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ, ಪ್ರೌಢ ಶಾಲಾ ಮುಖ್ಯಶಿಕ್ಷಕ ಹಾಗೂ ಸಹ ಶಿಕ್ಷಕರ ಸಂಘ, ಸಮರ್ಪಕ ಸೇವಾಟ್ರಸ್ಟ್​ ಬೆಂಗಳೂರು ಆಶ್ರಯದಲ್ಲಿ ಆಯೋಜಿಸಿದ್ದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಲ್​ಬಿಎ ಅಧಾರಿತ ಸಂಜೀವಿನ ಶಿಬಿರದಲ್ಲಿ ಮಾತನಾಡಿ, ಶಿಕ್ಷಕರು ಹೇಳುವುದನ್ನು ಗ್ರಹಿಸಿ ಅರ್ಥೈಹಿಸಿಕೊಂಡು ಓದಿನ ಕಡೆ ಗಮನಹರಿಸಬೇಕು. ಪ್ರತಿಯೊಂದಕ್ಕೂ ಎಸ್ಸೆಸ್ಸೆಲ್ಸಿ ಅರ್ಹತೆ ಮುಖ್ಯವಾಗಿದೆ. ನೀವು ಯಾವುದೇ ಹುದ್ದೆ ಪಡೆದರೂ ಪ್ರಾಮಾಣಿಕವಾಗಿ ಗೌರವದಿಂದ ಕೆಲಸ ಮಾಡಬೇಕು ಎಂದರು.

ಡಯಟ್​ನ ಉಪನಿರ್ದೇಶಕ ಮಂಜುನಾಥ್​ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಉತ್ತಮ ಪಲಿತಾಂಶ ಪಡೆಯುವಲ್ಲಿ ಹೆಚ್ಚು ಕಾಯೋರ್ನ್ಮೂಖವಾಗಿರುವುದು ಹೆಮ್ಮೆಯಾಗಿದೆ. ಪರೀಕ್ಷೆಯ ಬಗ್ಗೆ ವಿಶ್ಲೇಷಣೆ ಮಾಡುವ ಮೂಲಕ ಬದ್ಧತೆಯಿಂದ ಶಿಕ್ಷಕರ ತಂಡ ಕಾರ್ಯ ನಿರ್ವಹಿಸುತ್ತಿರುವುದು ರಾಜ್ಯದಲ್ಲೇ ಪ್ರಥಮವಾಗಿದೆ. ಇಲ್ಲಿನ ಶಾಸಕರ ಆಸಕ್ತಿ ಅವರ ಮುಂದಾಲೋಚನೆ ಕಳಾಜಿಯೇ ಇಲ್ಲಿನ ಶಿಕ್ಷಕರಿಗೆ ಪ್ರೇರಣೆಯಾಗಿದೆ ಎಂದರು.

ಹಿರಿಯ ಉಪನ್ಯಾಸಕ ರಾಜಣ್ಣ ಮಾತನಾಡಿ, ಹೆಚ್ಚು ಅಂಕಗಳನ್ನು ಪಡೆದವರಿಗೆ ಅನೇಕ ಟ್ರಸ್ಟ್​ಗಳು ಸಹಾಯಮಾಡಲು ಮುಂದೆ ಬರುತ್ತವೆ. ಆದರೆ ಇದೇ ಮೊದಲು ಕಡಿಮೆ ಅಂಕಗಳನ್ನು ತೆಗೆದುಕೊಂಡವರಿಗೆ ಈ ರೀತಿಯ ಕಾರ್ಯಕ್ರಮ ಮಾಡುವುದು ಪ್ರಥಮವಾಗಿದೆ. ಈ ಸಂಜೀವಿನಿ ಶಿಬಿರದಲ್ಲಿ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತೇವೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಹೆಚ್ಚು ಅಂಕಗಳನ್ನು ಪಡೆಯಲು ಯಾವುದೇ ಕಷ್ಟವಲ್ಲ ಎಂದರು.

ವಿದ್ಯಾರ್ಥಿಗಳಿಗಾಗಿ ಜ್ಞಾನ ಸಂಜೀವಿನಿ ಪುಸ್ತಕ ಬಿಡುಗಡೆ ಮಾಡಲಾಯಿತು. ಬಿಇಒ ಕಾಂತರಾಜು, ಸಮರ್ಪಕ ಸೇವಾಟ್ರಸ್ಟ್​ನ ರಾಜಣ್ಣ, ಸುರೇಶ್​, ನೋಡಲ್​ ಅಧಿಕಾರಿಗಳಾದ ಮಮತಾಮಣಿ, ಶ್ರೀರಂಗರಾಜು, ಅಕ್ಷರದಾಸೋಹದ ಅಧಿಕಾರಿ ಗವಿರಂಗಯ್ಯ, ತಾಲೂಕು ಪ್ರೌಢಶಾಲೆಯ ಮುಖ್ಯೋಪಾದ್ಯಯರ ಸಂಘದ ಅಧ್ಯಕ್ಷ ಗಂಗಾಧರ್​ ಇತರರು ಇದ್ದರು.