ಚಿತ್ತಾಪುರ: ರೈತರಿಗೆ ಉತ್ತಮ ಬೆಲೆ, ಕುಟುಂಬದವರಿಗೆ ಉದ್ಯೋಗ, ಗ್ರಾಮಗಳಿಗೆ ಮೂಲ ಸೌಲಭ್ಯ ಒದಗಿಸಿದಾಗ ಮಾತ್ರ ಓರಿಯಂಟ್ ಕಂಪನಿಯ ೨ನೇ ಘಟಕ ಆರಂಭಿಸಬಹುದು ಎಂದು ರೈತರು ಹೇಳಿದರು.
ಇಟಗಾ ಬಳಿಯ ಡಿಎವಿ ಶಾಲೆಯ ಆವರಣದಲ್ಲಿ ಓರಿಯಂಟ್ ಸಿಮೆಂಟ್ ಕಂಪನಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪರಿಸರ ಅನುಮತಿ ಪಡೆಯಲು ಸಾರ್ವಜನಿಕರ ಸಭೆಯಲ್ಲಿ ಮೊಗಲಾ ಗ್ರಾಪಂ ಸದಸ್ಯ ತಮ್ಮಣ್ಣ ಡಿಗ್ಗಿ ಮಾತನಾಡಿ, ಓರಿಯಂಟ್ ಮೊದಲ ಘಟಕ ನಿರ್ಮಾಣಕ್ಕೆ ಜಮೀನು ನೀಡಿದ ಅನೇಕ ರೈತರಿಗೆ ಇದುವರೆಗೆ ನ್ಯಾಯ ಸಿಕ್ಕಿಲ್ಲ. ಸರಿಯಾದ ಬೆಲೆ ಕೊಟ್ಟಿಲ್ಲ, ಉದ್ಯೋಗ ಸಿಕ್ಕಿಲ್ಲ. ಉದ್ಯೋಗ ಕೇಳಲು ಹೋದ ೧೩ ಕಾರ್ಮಿಕರ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಕೋರ್ಟ್ ನಿರಪರಾಧಿಗಳು ಎಂದು ಹೇಳಿದರೂ ಕಾಯಂ ಉದ್ಯೋಗ ನೀಡಿಲ್ಲ ಎಂದು ದೂರಿದರು.
ಮುಖಂಡರಾದ ಭೀಮಸಿಂಗ್ ಚವ್ಹಾಣ್, ಗೋಪಾಲ ರಾಠೋಡ್ ಮಾತನಾಡಿ, ಕಂಪನಿ ಆರಂಭ ಆದಾಗಿನಿಂದ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರು ಗುಳೆ ಹೋಗುವುದು ತಪ್ಪಿದೆ. ವ್ಯಾಪಾರ ವಹಿವಾಟ ಹೆಚ್ಚಾಗಿದೆ. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ಇದೀಗ ೨ನೇ ಘಟಕ ಆರಂಭಿಸಿದರೆ ಇನ್ನುಷ್ಟು ಉದ್ಯೋಗ ಸಿಗಲಿದೆ ಎಂದರು.
ರೈತರಾದ ಅಯ್ಯಪ್ಪ ಪೂಜಾರಿ, ತಿಪ್ಪಣ್ಣ ದೊಡ್ಡಮನಿ ಮಾತನಾಡಿ, ಕಂಪನಿ ಧೂಳಿನಿಂದಾಗಿ ಬೆಳೆಗಳು ಹಾಳಾಗುತ್ತಿವೆ. ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಾಲ ಮಟ್ಟ ಕುಸಿಯುತ್ತಿದೆ. ಕಲ್ಲಿನ ಗಣಿಯಿಂದ ಇಟಗಿಯಲ್ಲಿ ಮನೆಗಳು ಬಿರುಕು ಬಿಟ್ಟಿವೆ. ಎಕರೆಗೆ ೧ ಕೋಟಿ ರೂ. ನೀಡಬೇಕು. ೪ ಜನರಿಗೆ ಕಾಯಂ ಉದ್ಯೋಗ, ಉಚಿತ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಸಲಹೆ- ಸೂಚನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಬಳಿಕ ಕಂಪನಿ ಆರಂಭದ ಕುರಿತು ಸರ್ಕಾರ ನಿರ್ಧರಿಸಲಿದೆ ಎಂದರು.
ಗ್ರಾಪಂ ಅಧ್ಯಕ್ಷ ಹರಳಯ್ಯ ಬಡಿಗೇರ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ತಹಸೀಲ್ದಾರ್ ಸೈಯ್ಯದ್ ಷಾಷಾವಲಿ, ತಾಪಂ ಇಒ ನೀಲಗಂಗಾ ಬಬಲಾದಿ, ಓರಿಯಂಟ್ ಸಿಮೆಂಟ್ ಕಂಪನಿ ಉತ್ಪಾದನಾ ಘಟಕದ ಅಧ್ಯಕ್ಷ ಸತ್ಯಬ್ರಥ್ ಶರ್ಮಾ, ಪ್ರಧಾನ ವ್ಯವಸ್ಥಾಪಕ ಶಿವಾನಂದ ಪಾಟೀಲ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಜುನಾಥ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸತೀಶಕುಮಾರ, ಪ್ರಮುಖರಾದ ಭೀಮಣ್ಣ ಸಾಲಿ, ಮುಕ್ತಾರ್ ಪಟೇಲ್, ರಾಜೇಶ ದೊರೆ, ಶರಣಬಸಪ್ಪ ಸೂಗುರ, ಮಲ್ಲಿಕಾರ್ಜುನ ಪಾಟೀಲ್, ಉದಯಕುಮಾರ ಸಾಗರ, ರವಿ ರಾಠೋಡ್, ಕಿರಣ ನಾಯಕ, ಮಲ್ಲಿಕಾರ್ಜುನ ಬಂದಳ್ಳಿ, ಲಖನ್ ಚವ್ಹಾಣ್, ಸಾಬಣ್ಣ ಗುಡುಬಾ, ಗುರುನಾಥ, ಎಚ್. ಡೇವಿಡ್, ನಾಗೇಂದ್ರ ಡಿಗ್ಗಿ, ಜಗದೀಶ ಚವ್ಹಾಣ್, ಶ್ರೀಮಂತ ಗುತ್ತೇದಾರ್, ಸಲೀಂ ಪಟೇಲ್, ದೇವಿಂದ್ರಪ್ಪ ಬಮ್ಮನಳ್ಳಿ, ಮಂಜಪ್ಪ, ಎಸ್.ಜಿ.ನಂದ್ಯಾಳ, ಸಾಜೀದಕುಮಾರ, ನಾಗರೆಡ್ಡಿ ಗೋಪಶೇನ್, ರಾಮರೆಡ್ಡಿ ಕೊಳ್ಳಿ ಇತರರಿದ್ದರು.
ಕೆಐಡಿಪಿ ಕಾಯ್ದೆಯಡಿ ಭೂಮಿ ಖರೀದಿಸಿ: ಜಮೀನು ಖರೀದಿ ಮಾಡಿದ ಓರಿಯಂಟ್ ಕಂಪನಿ ೪೮೬ ರೈತರಿಗೆ ಕಾಯಂ ಉದ್ಯೋಗ ಕಲ್ಪಿಸಿಲ್ಲ. ೧೦೯ ಅಡಿಯಲ್ಲಿ ಭೂಮಿ ಖರೀದಿ ಮಾಡಿರುವುದು ಕಾನೂನು ಉಲ್ಲಂಘನೆಯಾಗಿದೆ. ಕಂಪನಿ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ಕೆಐಡಿಪಿ ಕಾಯ್ದೆಯಡಿ ರೈತರ ಜಮೀನು ಖರೀದಿ ಮಾಡಿದರೆ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಒಳ್ಳೆಯ ಬೆಲೆ, ದಿನಗೂಲಿ ಬಿಟ್ಟು ಕಾಯಂ ಉದ್ಯೋಗ, ಗ್ರಾಮಗಳಿಗೆ ಸೌಲಭ್ಯಗಳು ಕಲ್ಪಿಸಿದ ನಂತರ ೨ನೇ ಘಟಕಕ್ಕೆ ಅನುಮತಿ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದರು.