ಜಿಲ್ಲೆ

ಉತ್ತಮ ಬೆಲೆ ಇದ್ದರೂ ರೈತರಿಗೆ ಸಿಗದ ಲಾಭ

ಕೋಲಾರ: ಗ್ರಾಮೀಣ ಭಾಗಗಳಲ್ಲಿ ರೈತ ಉತ್ಪಾದಕ ಕಂಪನಿಗಳನ್ನು ರಚಿಸಿಕೊಂಡರೆ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯದೊಂದಿಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕಿ ರೂಪಾದೇವಿ ಹೇಳಿದರು.

ಕೆಜಿಎಫ್ ತಾಲೂಕು ಸುಂದರಪಾಳ್ಯ ಗ್ರಾಮದ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಮತ್ತು ಮೈರಾಡ ಸಂಸ್ಥೆಯಿಂದ ಗುರುವಾರ ಆಯೋಜಿಸಿದ್ದ ರೈತ ಉತ್ಪಾದಕ ಕಂಪನಿ ರಚನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಧಾನ್ಯ, ಹಣ್ಣು ತರಕಾರಿಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಉತ್ತಮ ಬೆಲೆ ಇದ್ದರೂ ಇದರ ಲಾಭ ರೈತನಿಗೆ ಸಿಗದೆ ವ್ಯಾಪಾರಸ್ಥನ ಪಾಲಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ರೈತನೇ ವ್ಯಾಪಾರಸ್ಥನಾಗಿ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಸರ್ಕಾರ ರೈತ ಉತ್ಪಾದಕ ಕಂಪನಿ ರಚನೆಗೆ ಉತ್ತೇಜನ ನೀಡುತ್ತಿದ್ದು, ಈ ದಿಸೆಯಲ್ಲಿ ಮೈರಾಡ ಸಂಸ್ಥೆಯಿಂದ ಗ್ರಾಮ ಮಟ್ಟದಲ್ಲಿ 20 ಸದಸ್ಯನ್ನೊಳಗೊಂಡ ರೈತ ಆಸಕ್ತಿ ಗುಂಪು ರಚಿಸಿ, ರೈತ ಉತ್ಪಾದಕ ಸಂಸ್ಥೆಗಳಾಗಿ ರಚಿಸುವುದು, ಉತ್ಪನ್ನ ಆಧಾರಿತ ವಾಣಿಜ್ಯ ಬೆಳೆಗಳ ಕಾಲಾವಧಿಯಲ್ಲಿ ಸೂಕ್ತ ಉತ್ಪನ್ನ ಆಧಾರಿತ ಯೋಜನೆ ರೂಪಿಸಿ ಅನುಷ್ಠಾನ, ಗುಣಮಟ್ಟದ ಬೇಸಾಯ ಪದ್ಧತಿ ಬಗ್ಗೆ ಮೈರಾಡ ಸಂಸ್ಥೆ 3 ವರ್ಷ ರೈತರ ಮಧ್ಯೆ ಕೆಲಸ ಮಾಡಲಿದೆ, ರೈತರಿಗೆ ಯಂತ್ರ ಪರಿಕರಗಳನ್ನು ಶೇ.50 ದರದಲ್ಲಿ ಸರ್ಕಾರದಿಂದ ಸಂಘಕ್ಕೆ ನೀಡುತ್ತದೆ ಎಂದರು.

ಬೇತಮಂಗಲ ಕೃಷಿ ಅಧಿಕಾರಿ ವಸಂತ ರೆಡ್ಡಿ, ಮೈರಾಡ ಸಂಸ್ಥೆಯ ಲೆಕ್ಕ ಅಧಿಕಾರಿ ಶ್ರೀಕಾಂತ್, ಕೆಡಿಎ ಸದಸ್ಯ ಮುನಿಸ್ವಾಮಿರೆಡ್ಡಿ, ಆರಾಧನಾ ಕಮಿಟಿ ಸದಸ್ಯ ಲಕ್ಷ್ಮೀನಾರಾಯಣ ಶರ್ಮಾ ಇತರರು ಹಾಜರಿದ್ದರು.