ಕೆ.ಆರ್.ನಗರ: ಒಳ್ಳೆಯ ಕೃತಿ ಮತ್ತು ಸಂಗೀತ ಎಂಬುದು ಧ್ಯಾನಕ್ಕೆ ಸಮನಾಗಿದ್ದು, ಮಿದುಳಿನ ಮೇಲೆ ನಿಯಂತ್ರಣ ಸಾಧಿಸಿ ಮಾನಸಿಕ ಮತ್ತು ದೈಹಿಕವಾಗಿ ಉತ್ತಮ ಆರೋಗ್ಯವಾಗಿರಲು ಸಹಕಾರಿಯಾಗಲಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಡಾ.ಚಂದ್ರಶೇಖರಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ಮೈಸೂರು ವಿವಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪಾಶ್ಚಾತ್ಯ ಮಹಾಕಾವ್ಯಗಳ ಪರಿಚಯ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಸಂಗೀತ ಮತ್ತು ಸಾಹಿತ್ಯದ ಕಡೆ ಗಮನ ಹರಿಸಿದರೆ ದೀರ್ಘಾಯುಷಿಗಳಾಗಿ ಬದುಕಬಹುದು. ವಿದ್ಯಾರ್ಥಿಗಳು ನಿರಂತರವಾಗಿ ಓದುವುದನ್ನು ರೂಢಿಸಿಕೊಂಡು ದೈಹಿಕ, ಮಾನಸಿಕ ಆರೋಗ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ರಾಮಾಯಣ ಮತ್ತು ಮಹಾಭಾರತ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿದ್ದು, ಅವುಗಳನ್ನು ಎಲ್ಲರೂ ಅಧ್ಯಯನ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು ಇದು ಮನುಷ್ಯನ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತಿದೆ. ಮಹಾಭಾರತ-ರಾಮಾಯಣ ಮಹಾಕಾವ್ಯಗಳಲ್ಲಿ ಮಾನವನ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದ್ದು, ಇವೆರಡು ಜನರ ಸಂಸ್ಕೃತಿ ಮತ್ತು ಜೀವನವನ್ನು ಪ್ರತಿನಿಧಿಸಲಿವೆ ಎಂದು ತಿಳಿಸಿದರು.
ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಕಾಲೇಜು ಪ್ರಾಂಶುಪಾಲ ಡಾ.ಬಿ.ಟಿ.ವಿಜಯ್, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ವಿಜಯ್, ಪ್ರಾಧ್ಯಾಪಕರಾದ ಡಾ.ವಿ.ಕೋಕಿಲಾ, ದೊಡ್ಡಗೌಡ, ಕೃತಿ, ಮಂಜುನಾಥ್ ಇತರರಿದ್ದರು.