ಜಿಲ್ಲೆ

ಉತ್ತಮ ಪರಿಸರ ನಿರ್ಮಿಸಲು ಸಂಕಲ್ಪ

ಅಥಣಿ ಗ್ರಾಮೀಣ: ಅಥಣಿ ತಾಲೂಕಿನಲ್ಲಿ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಿಸುವ ಸಂಕಲ್ಪದಿಂದ ೨೫ ಸಾವಿರ ಸಸಿ ನೆಡಲು ಚಾಲನೆ ನೀಡಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಪರಿಶಿಷ್ಟ ಪಂಗಡದ ವಿವಿಧ ಅಭಿವೃದ್ಧಿ ಯೋಜನೆಯಡಿ ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಡೈನಿಂಗ್ ಹಾಲ್ ಮತ್ತು ಅಡುಗೆ ಕೋಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿವರೆಗೆ ಪ್ರತಿ ವಿದ್ಯಾರ್ಥಿಗೆ ಒಂದು ಸಸಿ ದತ್ತು ನೀಡಿ ಪಾಲನೆ, ಪೋಷಣೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸುಸಜ್ಜಿತ ಪ್ರಯೋಗಾಲಯ ಮಂಜೂರಾಗಿದೆ ಎಂದರು.

ಈ ವಸತಿ ಶಾಲೆಯಲ್ಲಿ ೩೦೦ ವಿದ್ಯಾರ್ಥಿಗಳು ಓದುತ್ತಿದ್ದು, ಮಾದರಿಯಾಗಿ ರೂಪಿಸಲಾಗುವುದು. ಹಳೆಯ ಹಾಸ್ಟೆಲ್ ಒಳಗಡೆ ನೀರು ಬಾರದಂತೆ (ಛಾವಣಿ) ರೂಫ್ ಹಾಕಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಯಾದವಾಡ, ಜಿಪಂ ಎಇಇ ಈರಣ್ಣ ವಾಲಿ, ಕೆಆರ್‌ಐಡಿಎಲ್ ಅಧಿಕಾರಿ ಸಂತೋಷ ಶೇಗುಣಸಿ, ಪಿಎಸ್‌ಐ ಚಂದ್ರಕಾಂತ ಸಾಗನೂರ, ಓಗೆಪ್ಪ ಅರಟಾಳ, ತುಕಾರಾಮ ಗೊಂದಳೆ, ಮಲ್ಲಯ್ಯ ಪೂಜಾರಿ, ಸಿದರಾಯ ನಾಯಿಕ ಇತರರಿದ್ದರು.