ಬಳ್ಳಾರಿ : ವಿದ್ಯಾರ್ಥಿಗಳು ವೃತ್ತಿಪರ ಉತ್ತಮ ಪತ್ರಕರ್ತರಾಗಲು ಬರವಣಿಗೆ ಕೌಶಲ್ಯದೊಂದಿಗೆ ಭಾಷೆಯ ಜ್ಞಾನ ಹೊಂದುವುದು ಅಗತ್ಯವಾಗಿದೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ. ಜೆ. ತಿಪ್ಪೇರುದ್ರಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ವಿಎಸ್‌ಕೆ ವಿವಿಯ ಡಾ.ಬಿ. ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಿಕೋದ್ಯಮ ಕ್ಷೇತ್ರವು ನೈಜತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಸಂಬಂಧಕ್ಕೆ ಬೆಲೆ ಕೊಡುವ ಮಾಧ್ಯಮ ನೀತಿಯನ್ನು ಬಿಂಬಿಸುವಂತಿರಬೇಕು. ವಿದ್ಯಾರ್ಥಿಗಳು ಪದಗಳ ಸಂಗ್ರಹಣೆಗಾಗಿ ಹೆಚ್ಚಾಗಿ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡು, ಜೀವನ ಪರ್ಯಂತ ಕಲಿಯುವ ಕೌಶಲ್ಯದಲ್ಲಿ ನಿರತರಾಗಬೇಕು. ಭಾಷೆಯ ಬಗ್ಗೆ ಜ್ಞಾನ ಹೊಂದಿದಾಗ ಮಾತ್ರ ಉತ್ತಮ ಪತ್ರಕರ್ತರಾಗಲು ಸಾಧ್ಯ ಎಂದರು.
ವಿಜಯವಾಣಿದಿನ ಪತ್ರಿಕೆ ಗಂಗಾವತಿ ಆವೃತ್ತಿಯ ಸ್ಥಾನಿಕ ಸಂಪಾದಕ ಜಗನ್ನಾಥ ದೇಸಾಯಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಮಯ ಪಾಲನೆ ಬಹುಮುಖ್ಯವಾಗಿದ್ದು, ಉತ್ಸುಕತೆಯಿಂದ ಕಾರ್ಯ ನಿರ್ವಹಿಸಬೇಕು. ಪತ್ರಿಕೋದ್ಯಮ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವವರು ಅದಕ್ಕೆ ಬದ್ಧರಾಗಿ ಒತ್ತಡ ನಿಭಾಯಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಪತ್ರಕರ್ತ ವೃತ್ತಿ ಆಯ್ಕೆ ಮಾಡಿಕೊಂಡವರು, ನಿರಂತರ ಅಧ್ಯಯನ, ಸಾಹಿತ್ಯ-ಕೃತಿ ಓದುವ ಹವ್ಯಾಸ, ವಿವಿಧ ಪತ್ರಿಕೆ ವಿಮರ್ಶಿಸುವ ಹಾಗೂ ಕ್ರಿಯಾಶೀಲವಾಗಿ ಕಾರ್ಯ ಪ್ರವೃತ್ತರಾಗಬೇಕು. ಪತ್ರಿಕೋದ್ಯಮ ವೃತ್ತಿ ಮಾತ್ರವಲ್ಲದೆ ಸಮಾಜ ಸೇವೆಯೂ ಆಗಿದ್ದು, ಒಬ್ಬ ಉತ್ತಮ ಪತ್ರಕರ್ತ ಅಥವಾ ವರದಿಗಾರನು ಸಮಾಜಕ್ಕೆ ಉಪಯುಕ್ತವಾಗುವಂತ ನಿಖರವಾದ ಮತ್ತು ವಸ್ತುನಿಷ್ಠ ಸುದ್ದಿ ಒದಗಿಸಿಬೇಕು. ಸಾರ್ವಜನಿಕರು, ವಿದ್ಯಾರ್ಥಿಗಳು ಪತ್ರಿಕೆ ಓದುವ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ನಿತ್ಯವೂ ವಿವಿಧ ಹೊಸ ವಿಷಯಗಳನ್ನು ಕಲಿಯುವ ಅವಕಾಶವಿದ್ದು, ಪತ್ರಕರ್ತರು ಚಾಣಾಕ್ಷತನದಿಂದ ಸುದ್ದಿ ವರದಿ ಮಾಡುವ ಕೆಲಸ ನಿರ್ವಹಿಸಬೇಕು, ಇದರ ಜೊತೆಗೆ ಬದಲಾಗುವ ತಂತ್ರಜ್ಞಾನಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳುವ ಹಾಗೂ ಅಳವಡಿಸಿಕೊಳ್ಳುವ ಕುಶಲತೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ವಿ. ತುಕಾರಾಂ ರಾವ್ ಮಾತನಾಡಿ, ಪತ್ರಿಕೋದ್ಯಮ ಸವಾಲಿನ ಕ್ಷೇತ್ರವಾಗಿದ್ದು, ಪತ್ರಕರ್ತನು ತಾಳ್ಮೆ ಮತ್ತು ನಿಷ್ಠೆಯಿಂದ ಕೆಲಸ ನಿರ್ವಹಿಸಿ, ಘಟನಾವಳಿಗಳ ಬಗ್ಗೆ ಎಚ್ಚರವಹಿಸಿ ನ್ಯಾಯಸಮ್ಮತವಾಗಿ ಸುದ್ದಿ ಮಾಡಬೇಕು ಎಂದು ಹೇಳಿದರು.
ವಿವಿ ಕುಲಸಚಿವ ಎಸ್.ಎನ್. ರುದ್ರೇಶ್, ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ರಾಕೇಶ್ ವಿ.ತಾಳಿಕೋಟಿ ಮಾತನಾಡಿದರು. ಈ ವೇಳೆ ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮ ಕುರಿತಂತೆ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಅಂಶಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.