ಹುಣಸೂರು: ಯಾವುದೇ ದೇಶ ಪ್ರಗತಿ ಹೊಂದಬೇಕಾದರೆ ಆ ದೇಶದಲ್ಲಿ ಜನಿಸುವ ಮಕ್ಕಳ ಆರೋಗ್ಯ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯದ ಮೇಲೆ ಅವಲಂಬಿತವಾಗಿದೆ ಎಂದು ಸಂಚಾರಿ ಆದಿವಾಸಿ ಆರೋಗ್ಯ ಘಟಕದ ಮುಖ್ಯಸ್ಥೆ ಡಾ.ಎಚ್.ಕೆ.ಸೌಮ್ಯಶ್ರೀ ಅಭಿಪ್ರಾಯಪಟ್ಟರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ಮಂಗಳವಾರ ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಆಯೋಜಿಸಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಜೀವನ ನಡೆಸಲು ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಬುಡಕಟ್ಟುಗಳ ಕ್ಷೇಮಾಭಿವೃದ್ಧಿಯ ಹಿತಚಿಂತನೆಯಿಂದ ಸಂಚಾರಿ ಆರೋಗ್ಯ ಘಟಕ ತೆರೆಯಲಾಗಿದೆ. ಆದಿವಾಸಿ ಕುಟುಂಬ ಈ ಸೌಕರ್ಯವನ್ನು ಸದುಪಯೋಗ ಪಡಿಸಿಕೊಂಡು ಸ್ವಾಸ್ಥ್ಯ ಜೀವನ ನಡೆಸಬೇಕು ಎಂದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ, ಸ್ನೇಹಕ್ಲಿನಿಕ್, ಶುಚಿ ಕಾರ್ಯಕ್ರಮ, ಮಾತೃಪೂರ್ಣ ಯೋಜನೆ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳ ಕುರಿತು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಮಾಹಿತಿ ಒದಗಿಸಿದರು.
ಕಾರ್ಯಗಾರದಲ್ಲಿ ಸದೃಢ ಟ್ರಸ್ಟ್‌ನ ಮಂಜುನಾಥ್, ಸ್ವಾಮಿ ವಿವೇಕನಂದ ಯುತ್ ಮೂಮೆಂಟ್ ಸಂಸ್ಥೆಯ ಪೂಜಾ, ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು, ಪರಿವರ್ತನ ಸಂಸ್ಥೆಯ ಸರಸ್ವತಿ ಮತ್ತು ಪವನ್, ಐಟಿ ಸಂಸ್ಥೆಯ ನಾಗವೇಣಿ, ಡೀಡ್ ಸಂಸ್ಥೆಯ ಎ.ಪ್ರಕಾಶ್, ಶಾರದ, ರಕ್ಷಿತಾ, ಬುಡಕಟ್ಟು ಕೃಷಿಕರ ಸಂಘದ ಜಯಪ್ಪ, ಬೊಮ್ಮಿ, ವಿಠಲ್, ಚಂದ್ರು, ಕೆಂಪಮ್ಮ, ಶಿವಗಂಗೆ, ಬಸಪ್ಪ ಮುಂತಾದವರು ಹಾಜರಿದ್ದರು.