ಜಿಲ್ಲೆ

ಉತ್ತಮ ಜೀವನ ಶೈಲಿ ಬೆಳೆಸಿಕೊಳ್ಳಿ

ಚಿತ್ರದುರ್ಗ: ಪ್ರಸ್ತುತ ಒತ್ತಡದ ಜೀವನದಿಂದಾಗಿ ನಾನಾ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ್ ಹೇಳಿದರು.

ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಮಂಗಳವಾರ ನಗರದ ವಕೀಲರ ಭವನದಲ್ಲಿ ಏರ್ಪಡಿಸಿದ್ದ ಹೃದಯ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬದಲಾದ ಜೀವನ ಶೈಲಿ, ಆಹಾರ ಪದ್ಧತಿಗಳಿಂದ ಹೃದಯಾಘಾತಗಳ ಸಂಖ್ಯೆ ಅಧಿಕವಾಗುತ್ತಿವೆ. ಆದ್ದರಿಂದ ಮದ್ಯಪಾನ,ಧೂಮಪಾನ ಸೇರಿ ದುಶ್ಚಟಗಳಿಂದ ದೂರವಿರಬೇಕು. ಉತ್ತಮ ಅಭ್ಯಾಸಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಮಾತನಾಡಿ, ಅತಿಯಾದ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದಲೂ ಹೃದಯಾಘಾತ ಸಂಭವಿಸುವ ಸಾಧ್ಯತೆಗಳಿರುತ್ತವೆ. ನಿರ್ಲಕ್ಷೃ ಬೇಡ. ವೈದ್ಯರ ಬಳಿ ಹೋಗಿ ತಪಾಸಣೆ, ಚಿಕಿತ್ಸೆ ಪಡೆಯುವುದು ಒಳ್ಳೆಯದು, ಕಾಲಕಾಲಕ್ಕೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳು, ಬೊಜ್ಜು, ವಾಯು ಮಾಲಿನ್ಯಗಳಿಂದಲೂ ಹೃದಯಾಘಾತವಾಗುವ ಸಾಧ್ಯತೆಗಳಿವೆ ಎಂದರು.

ಕೊಬ್ಬಿನಾಂಶ ಅತಿಯಾಗಿರದ ಆಹಾರ ಸೇವಿಸಬೇಕು. ಮದ್ಯಪಾನ, ಧೂಮಪಾನದಿಂದ ದೂರವಿದ್ದು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಎದೆ ಉರಿ ಎಂದು ಉದಾಸೀನ ಮಾಡದೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದರು.

ಚಿತ್ರದುರ್ಗ ವೈದ್ಯಕೀಯ ಕಾಲೇಜು ಡೀನ್ ಡಾ.ಬಿ.ವೈ.ಯುವರಾಜ್ ಮಾತನಾಡಿ, ಅಸಿಡಿಟಿ ಜಾಸ್ತಿಯಾದಾಗ ದೇಹದಲ್ಲಿ ಬೇರೆ,ಬೇರೆ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದು ತಿಳಿಸಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮುಂದುವರಿದಂತೆ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಡಾ.ಜಿ.ಎಚ್.ಮೇಘಾ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ‌್ಯದರ್ಶಿ ಆರ್.ಗಂಗಾಧರ್ ಇದ್ದರು.