ಜಿಲ್ಲೆ

ಉತ್ತಮ ಗುರಿ ಸಾಧನೆಗೆ ಪೂರಕ ; ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ ಅಭಿಮತ

ತುಮಕೂರು : ಉತ್ತಮ ಗುರಿ ಮತ್ತು ಉದ್ದೇಶಗಳು ಮಕ್ಕಳ ಮುಂದಿನ ಸಾಧನೆಗೆ ಪೂರಕ ಎಂದು ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.

ಮಕ್ಕಳ ಹಕ್ಕುಗಳ ಮಾಸಾಚರಣೆ ಅಂಗವಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ ಹಾಗೂ ಹೈದರಾಬಾದ್‌ನ ಯುನಿಸೆಫ್ ಸಹಯೋಗದಲ್ಲಿ ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಮಕ್ಕಳ ಹಾಗೂ ಪಾಲಕರ ಮೊದಲ ಆದ್ಯತೆಯಾಗಬೇಕು. ತಪ್ಪದೇ ಶಾಲೆಗೆ ಹಾಜರಾಗುವುದು ಮಕ್ಕಳ ಮೂಲ ಕರ್ತವ್ಯವಾಗಿದ್ದು, ಪ್ರತೀ ಮಗುವೂ ಕಡ್ಡಾಯ ಶಿಕ್ಷಣ ಪಡೆಯುವಂತಾಗಬೇಕು ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ್ ಮಾತನಾಡಿ, ಸಂವಿಧಾನದಲ್ಲಿ ನೀಡಿರುವ ಮಕ್ಕಳ ಹಕ್ಕುಗಳನ್ನು ಎಲ್ಲ ರೀತಿಯಲ್ಲಿಯೂ ರಕ್ಷಿಸುವುದು ಪ್ರತೀ ಇಲಾಖೆ, ಅಧಿಕಾರಿಗಳು ಹಾಗೂ ಸಾರ್ವಜನಿಕರ ಆದ್ಯ ಕರ್ತವ್ಯ. ಶಾಲೆ, ಮನೆ ಸೇರಿದಂತೆ ಇನ್ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಭಯ, ಕಿರಿ-ಕಿರಿ ಉಂಟು ಮಾಡುವ ಘಟನೆಗಳು ಜರುಗಿದಲ್ಲಿ ವಿಳಂಬ ಮಾಡದೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ತಮ್ಮ ಹಕ್ಕುಗಳನ್ನು ತಾವೇ ರಕ್ಷಿಸಿಕೊಳ್ಳುವಷ್ಟು ಸಮರ್ಥರಾಗಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಸಂವಿಧಾನದ ಪ್ರಸ್ತಾವನೆ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೇ ಪೋಕ್ಸೋ ಕಾಯ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.

ಮಕ್ಕಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಪಾಲಕರ ಪಾತ್ರವೂ ಬಹಳ ಮುಖ್ಯವಾಗಿದ್ದು, ಮಕ್ಕಳನ್ನು ಶಾಲೆ ಬಿಡಿಸಿ ದುಡಿಸಿಕೊಳ್ಳುವಂತಹ ಪ್ರವೃತ್ತಿಯಿಂದ ಹೊರಗೆ ಬಂದು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕು ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಎಸ್.ನಂದಕುಮಾರ್, ಡಿಡಿಪಿಐ ಸಿ.ನಂಜಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಶಾಲಿನಿ ಮತ್ತಿತರರು ಇದ್ದರು.

ಸಮಸ್ಯೆ ಅನಾವರಣ : ಸಂವಾದದಲ್ಲಿ ನಾಗವಲ್ಲಿಯ ಕರ್ನಾಟಕ ಪಬ್ಲಿಕ್ ಶಾಲೆ, ಎಸ್‌ವಿಕೆ ಹೈಸ್ಕೂಲ್, ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ, ಶ್ರೀಸಿದ್ಧಾರ್ಥ ವಸತಿ ಪ್ರೌಢಶಾಲೆ ಸೇರಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ, ಅಲೆಮಾರಿ ಮತ್ತು ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ರಕ್ಷಣೆ, ಮಂಜೂರಾಗದ ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ಮೂಲ ಸೌಕರ್ಯಗಳ ಕೊರತೆ ಹಾಗೂ ವಿವಿಧ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಅಹವಾಲುಗಳನ್ನು ಅಧಿಕಾರಿಗಳ ಮುಂದಿಟ್ಟು ಸಲಹೆ-ಸೂಚನೆ ಪಡೆದರು.

ಮಕ್ಕಳು ಮತ್ತು ಸಾರ್ವಜನಿಕರ ಹಕ್ಕುಗಳಿಗೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಲು ಜಿಲ್ಲೆಯಲ್ಲಿ ಕಲ್ಪತರು ಪಡೆ ನೇಮಿಸಲಾಗಿದೆ. ಯಾವ ಸಂದರ್ಭದಲ್ಲಿಯೇ ಆಗಲಿ ಸಮಸ್ಯೆಗೆ ಸಿಲುಕಿದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಬಹುದು, ಕೆಲವೇ ನಿಮಿಷಗಳಲ್ಲಿ ಸ್ಪಂದಿಸಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶೀಘ್ರ ಕ್ರಮವಹಿಸಲಾಗುವುದು. ರಾಧಾಕೃಷ್ಣ ಡಿವೈಎಸ್‌ಪಿ