ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸಮಾಜದ ಎಲ್ಲರ ಕಣ್ಣೀರು ಒರೆಸುವುದು ಹಾಗೂ ದುರ್ಬಲರಿಗೆ ಆರ್ಥಿಕ ಶಕ್ತಿ ತುಂಬುವುದು ಗ್ರಾಮ ಸರ್ಕಾರದ ಉದ್ದೇಶ. ಇದುವರೆಗೆ ಎಷ್ಟೋ ಅಧ್ಯಕ್ಷ, ಉಪಾಧ್ಯಕ್ಷರು ಆಗಿ ಹೋಗಿದ್ದಾರೆ. ಜನಮನದಲ್ಲಿ ಶಾಶ್ವತವಾಗಲು ಅಧಿಕಾರವಧಿಯಲ್ಲಿ ನಾವು ಮಾಡುವ ಉತ್ತಮ ಕೆಲಸ ಕಾರಣವಾಗುತ್ತದೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾಸೀರ್ ನಡುಪದವು ಹೇಳಿದರು.
ಬಾಳೆಪುಣಿ ಗ್ರಾಪಂ ಪಂಚಾಯಿತಿಯ ರಾಜೀವ ಗಾಂಧಿ ಸಭಾಂಗಣದಲ್ಲಿ ಗುರುವಾರ ಬಾಳೆಪುಣಿ ಗ್ರಾಪಂ 2023-25ನೇ ಸಾಲಿನ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಳೆಪುಣಿ ಬಾಪು ಘನ ಸಂಪನ್ಮೂಲ ಘಟಕ ನಿಕಟಪೂರ್ವಾಧ್ಯಕ್ಷ ಇಬ್ರಾಹಿಂ ತಪ್ಷಿಯಾ ನಡುಪದವು, ಮಾಜಿ ಅಧ್ಯಕ್ಷ ಜನಾರ್ದನ ಗಟ್ಟಿ ಮಾತನಾಡಿದರು.
ಅಧ್ಯಕ್ಷರಾಗಿ ಗೀತಾ ಭಂಡಾರಿ ಮತ್ತು ಉಪಾಧ್ಯಕ್ಷರಾಗಿ ಸಿ.ಎಂ.ಶರೀಫ್ ಪಟ್ಟೋರಿ ಅವಿರೋಧವಾಗಿ ಆಯ್ಕೆಯಾದರು. ತಾಲೂಕು ತಹಸೀಲ್ದಾರ್ ಪುಟ್ಟರಾಜು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಕಾರ್ಯದರ್ಶಿ ಆಯಿಶಾ, ಮಾಜಿ ಅಧ್ಯಕ್ಷರಾದ ಸುಕನ್ಯಾ ರೈ, ರಝಿಯಾ, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೈದರ್ ಕೈರಂಗಳ, ಸೇವಾದಳದ ಝುಬೈರ್ ಮತ್ತಿತರರು ಉಪಸ್ಥಿತರಿದ್ದರು. ನಿಕಟಪೂರ್ವ ಉಪಾಧ್ಯಕ್ಷ ಬಶೀರ್ ಕಾರ್ಯಕ್ರಮ ನಿರೂಪಿಸಿದರು.
ಬಾಳೆಪುಣಿ ಗ್ರಾಮ ಪಂಚಾಯಿತಿಗೆ ಇತಿಹಾಸವಿದ್ದು ಅಧಿಕಾರ ಸಿಗುವುದೇ ಭಾಗ್ಯ. ರಾಜಕೀಯರಹಿತವಾಗಿ ಪ್ರತಿ ವಾರ್ಡಿಗೆ ಅನುದಾನ ಹಂಚುವ ಇಲ್ಲಿನ ವಾಡಿಕೆ ಮುಂದುವರಿಸಲಾಗುವುದು. ಕುಡಿಯುವ ನೀರು ಹಾಗೂ ಘನತ್ಯಾಜ್ಯ ಘಟಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದರೆ ಗ್ರಾಮದ ಅಭಿವೃದ್ಧಿಗೆ ದೊಡ್ಡ ಮಟ್ಟದ ಅನುದಾನ ಉಳಿಯಲಿದೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಸಿ.ಎಂ.ಶರೀಫ್ ಪಟ್ಟೋರಿ, ಉಪಾಧ್ಯಕ್ಷ, ಬಾಳೆಪುಣಿ ಗ್ರಾ.ಪಂ. https://www.vijayavani.net/mite-college-degree https://www.vijayavani.net/shrinivas-national-seminar